ರಶ್ಯದ 30 ಅಧಿಕಾರಿಗಳ ವಿರುದ್ಧ ಕೆನಡ ದಿಗ್ಬಂಧನ
ಭ್ರಷ್ಟಾಚಾರ ವಿರೋಧಿ ವಕೀಲ ಸಾವಿನ ಪ್ರಕರಣ

ಒಟ್ಟಾವ (ಕೆನಡ), ನ. 4: ಭ್ರಷ್ಟಾಚಾರ ವಿರೋಧಿ ವಕೀಲ ಸರ್ಗೀ ಮ್ಯಾಗ್ನಿಸ್ಕಿಯ ಸಾವು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, 30 ರಶ್ಯ ಅಧಿಕಾರಿಗಳ ವಿರುದ್ಧ ಕೆನಡ ಶುಕ್ರವಾರ ದಿಗ್ಬಂಧನಗಳನ್ನು ವಿಧಿಸಿದೆ.
ದಿಗ್ಬಂಧನದ ಹಿನ್ನೆಲೆಯಲ್ಲಿ, ರಶ್ಯದ ಈ ಅಧಿಕಾರಿಗಳ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಅವರು ಕೆನಡ ಪ್ರವೇಶಿಸದಂತೆ ನಿಷೇಧ ಹೇರಲಾಗುವುದು.
ಮಾನವಹಕ್ಕು ಉಲ್ಲಂಘನೆಯಲ್ಲಿ ತೊಡಗಿದವರನ್ನು ಶಿಕ್ಷಿಸಲು ನೂತನ ಕಾನೂನು ಕೆನಡ ಸರಕಾರಕ್ಕೆ ಅವಕಾಶ ನೀಡುವುದು ಎಂದು ಕೆನಡ ವಿದೇಶ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.
230 ಮಿಲಿಯ ಡಾಲರ್ ತೆರಿಗೆ ವಂಚನೆಯನ್ನು ಬಹಿರಂಗಪಡಿಸಿದ ಸರ್ಗೀ ಮ್ಯಾಗ್ನಿಸ್ಕಿಯನ್ನು 2009ರಲ್ಲಿ ಜೈಲಿಗೆ ಹಾಕಲಾಯಿತು. ಬಳಿಕ, ಜೈಲಿನಲ್ಲಿ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು.
ಮಾನವಹಕ್ಕು ಉಲ್ಲಂಘನೆಗಾಗಿ ರಶ್ಯದ ಅಧಿಕಾರಿಗಳ ವಿರುದ್ಧ ದಿಗ್ಬಂಧನೆ ಹೇರಲು ಅವಕಾಶ ನೀಡುವ ‘ಸರ್ಗಿ ಮ್ಯಾಗ್ನಿಸ್ಕಿ ಕಾನೂನು’ನ್ನು ಕೆನಡ ಕಳೆದ ತಿಂಗಳು ಅಂಗೀಕರಿಸಿತ್ತು.
ಈ ಹಿಂದೆ, ‘ಮ್ಯಾಗ್ನಿಸ್ಕಿ ಕಾನೂನು’ನ್ನು ಅಮೆರಿಕ ಅಂಗೀಕರಿಸಿತ್ತು ಹಾಗೂ ಆ ಕಾನೂನಿನ ಪ್ರಕಾರ, 40ಕ್ಕೂ ಅಧಿಕ ರಶ್ಯದ ಹಿರಿಯ ಅಧಿಕಾರಿಗಳ ವಿರುದ್ಧ ನಿಷೇಧ ವಿಧಿಸಿತ್ತು.
ರಶ್ಯದಿಂದ ಪ್ರತೀಕಾರಾತ್ಮಕ ಕ್ರಮ
ಕೆನಡದ ದಿಗ್ಬಂಧನಕ್ಕೆ ಪ್ರತಿಯಾಗಿ ರಶ್ಯ ಕೂಡ ಇದಕ್ಕೆ ಸರಿಸಮಾನವಾದ ಕ್ರಮಗಳನ್ನು ತೆಗೆದುಕೊಂಡಿದೆ. ಅದೂ ಕೂಡ ಕೆನಡದ 30 ಅಧಿಕಾರಿಗಳನ್ನು ಉಚ್ಚಾಟಿಸಿದೆ ಹಾಗೂ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳೀದೆ.
‘‘ನಾವು ಕೂಡ ಇದಕ್ಕೆ ಸರಿಸಮಾನವಾದ ದಿಗ್ಬಂಧನಗಳನ್ನು ಹೇರಬೇಕಾಗಿದೆ’’ ಎಂದು ರಶ್ಯದ ವಿದೇಶ ಸಚಿವಾಲಯ ಶುಕ್ರವಾರ ತಡ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.







