ಕೆ.ಎಂ.ಕಾರ್ಯಪ್ಪಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ಶಿಫಾರಸು: ಬಿಪಿನ್ ರಾವತ್ ಭರವಸೆ

ಮಡಿಕೇರಿ, ನ.4 : ರಾಷ್ಟ್ರದ ಪ್ರಥಮ ಸೇನಾ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭಾರತೀಯ ಭೂ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
ಗೋಣಿಕೊಪ್ಪದ ಕಾವೇರಿ ಕಾಲೇಜಿನ ಆವರಣದಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಕಂಚಿನ ಪ್ರತಿಮೆಯನ್ನು ಸೇನಾ ಗೌರವಗಳೊಂದಿಗೆ ಶನಿವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
ಭಾರತೀಯ ಸೇನಾ ಕ್ಷೇತ್ರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಧ್ರುವ ತಾರೆಗಳಿದ್ದಂತೆ. ಭಾರತೀಯ ಸೇನೆಯಲ್ಲಿ ಈ ಇಬ್ಬರು ಮಹಾನ್ ದಂಡನಾಯಕರು ದೇಶದ ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಬಿಪಿನ್ ರಾವತ್ ಶ್ಲಾಘಿಸಿದರು.
ಸ್ವಾತಂತ್ರ್ಯ ನಂತರ ರಾಷ್ಟ್ರದ ಸಂದಿಗ್ಧ ಪರಿಸ್ಥಿತಿ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರು ರಾಷ್ಟ್ರದ ರಕ್ಷಣೆಗೆ ಶ್ರಮಿಸಿದ್ದಾರೆ. ಇವರ ಧೈರ್ಯ ಸಾಹಸ ಪ್ರೌಡಿಮೆಯನ್ನು ಮೆಚ್ಚಬೇಕು ಎಂದರು.
ಜನರಲ್ ಕೆ.ಎಸ್. ತಿಮ್ಮಯ್ಯ ಮ್ಯೂಸಿಯಂಗೆ ಭಾರತೀಯ ಭೂ ಸೇನಾ ವಿಭಾಗದಿಂದ 10 ಲಕ್ಷ ರೂ. ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಈ ವೇಳೆ ಬಿಪಿನ್ ರಾವತ್ ಅವರನ್ನು ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ(ನಿವೃತ್ತ) ಅವರು ಪೀಚೆಕತ್ತಿ ನೀಡಿ ಗೌರವಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂ ವತಿಯಿಂದ ಕೂರ್ಗ್ ಡೆಂಟಲ್ ಸೈನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕಂಜಿತಂಡ ಅಯ್ಯಪ್ಪಅವರಿಗೆ ಜೀವಮಾನದ ಸಾಧನೆಗಾಗಿ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಜನರಲ್ ಸೋಮಣ್ಣ, ಲೆಫ್ಟಿನೆಂಟ್ ಜನರಲ್ ಆನಂದ್, ಮೇಜರ್ ಜನರಲ್ ಶಿಷಾರ್, ಆರ್.ಕೆ. ಸತ್ಯದೇವ್, ಕರ್ನಲ್ ರಾಮಚಂದ್ರನ್, ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಾದ್ ಮತ್ತಿತರರಿದ್ದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಫೋರಂನ ಅಧ್ಯಕ್ಷ ಕಂಡ್ರತಂಡ ಸುಬ್ಬಯ್ಯ ಸ್ವಾಗತಿಸಿದರು. ಮೇಜರ್ ಮಂಜಪ್ಪಕಾರ್ಯಕ್ರಮ ನಿರೂಪಿಸಿದರು.







