ಉದ್ಯೋಗಕ್ಕಾಗಿ 'ಮೈ ಜಾಬ್' ಮೊಬೈಲ್ ಆ್ಯಪ್ ಬಿಡುಗಡೆ
ಉದ್ಯೋಗವಿಲ್ಲದಿದ್ದರೆ ಮತವಿಲ್ಲ ಅಭಿಯಾನ

ಬೆಂಗಳೂರು, ನ.4: ನಿರುದ್ಯೋಗಿಗಳಿಗಾಗಿ ಉದ್ಯೋಗದ ಮಾಹಿತಿ ನೀಡುವ ಸಲುವಾಗಿ ಉದ್ಯೋಗಕ್ಕಾಗಿ ಯುವ ಜನರು ಸಂಘಟನೆ ವತಿಯಿಂದ 'ಮೈ ಜಾಬ್' ಎಂಬ ಮೊಬೈಲ್ ಆ್ಯಪ್ ಅನ್ನು ಇಂದಿಲ್ಲಿ ಬಿಡುಗಡೆ ಮಾಡಲಾಯಿತು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಮುಖಂಡ ಮುತ್ತುರಾಜು, ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗಿಗಳು ಸರಿಯಾದ ಉದ್ಯೋಗದ ಮಾಹಿತಿಯಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಖಾಲಿಯಿರುವ ಸರಕಾರಿ ಉದ್ಯೋಗಗಳ ಮಾಹಿತಿ ನೀಡುವ ಸಲುವಾಗಿ ಆ್ಯಪ್ ಅನ್ನು ತಯಾರಿಸಿದ್ದು, ಗೂಗಲ್ ಪ್ಲೇ ಸ್ಟೋರ್ ಮೂಲಕ ಉಚಿತವಾಗಿ ಪಡೆಯಬಹುದಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿಗಳನ್ನು ಮುಗಿಸಿಕೊಂಡು ಹೊರ ಬರುತ್ತಿದ್ದಾರೆ. ಆದರೆ, ಅವರೆಲ್ಲರೂ ಉದ್ಯೋಗವಿಲ್ಲದೆ ಪರದಾಡುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಿದ ಭರವಸೆಗಳನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಆದರೆ, ಇದುವರೆಗೂ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ ಎಂಬ ಸ್ಪಷ್ಟ ಲೆಕ್ಕವಿಲ್ಲ ಎಂದ ಅವರು, ಯುವ ಜನರನ್ನು ದಿಕ್ಕು ತಪ್ಪಿಸುವ ಸಲುವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಯಾತ್ರೆಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಒಂದು ಪಕ್ಷದ ಮೇಲೆ ಮತ್ತೊಂದು ಪಕ್ಷ ಕೇವಲ ಕೆಸರು ಎರಚಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಉದ್ಯೋಗ ಇಲ್ಲ ಅಂದ್ರೆ ಓಟು ಇಲ್ಲ ಅಭಿಯಾನ: ಚುನಾವಣೆಗೂ ಮೊದಲೇ 10 ಲಕ್ಷ ಉದ್ಯೋಗ ಸೃಷ್ಟಿ ಮಾಡಿದರೆ ಮಾತ್ರ ಮತ ಹಾಕುತ್ತೇವೆ ಎಂದು ಕಳೆದ ಮೇ ತಿಂಗಳಿಂದ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುತ್ತಿದೆ. ಉದ್ಯೋಗ ಸೃಷ್ಟಿಯ ಪರ್ಯಾಯ ಮಾದರಿಯನ್ನು ಸರಕಾರದ ಮುಂದಿಡಲಾಗುತ್ತದೆ. ಅದಕ್ಕಾಗಿ ತಜ್ಞರ ನೆರವು ಪಡೆದುಕೊಳ್ಳಲಾಗಿದೆ. ಆದರೆ, ಸರಕಾರ ಈ ಕುರಿತು ನೀತಿಯನ್ನು ರೂಪಿಸಬೇಕು. ನಿರುದ್ಯೋಗಿ ಯುವಜನರಿಗೆ ಉದ್ಯೋಗ ಸಿಗುವಂತಾಗಬೇಕು ಎಂದು ಮುತ್ತುರಾಜು ಒತ್ತಾಯಿಸಿದರು.
ಫೆ.4 ರಂದು ಯುವ ಅಧಿವೇಶನ: ರಾಜ್ಯಾದ್ಯಂತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡ ಸಮಿತಿ ಹಾಗೂ 100 ವಿಧಾನಸಭಾ ಕ್ಷೇತ್ರಗಳಲ್ಲಿ ಕ್ಷೇತ್ರ ಸಮಿತಿ ರಚಿಸಲಾಗುತ್ತಿದ್ದು, ಫೆ.4, 2018 ರಂದು ಬೆಂಗಳೂರಿನಲ್ಲಿ ಯುವ ಅಧಿವೇಶನ ಸಂಘಟಿಸಲಾಗುತ್ತಿದೆ. ಈ ಅಧಿವೇಶನದಲ್ಲಿ ಯುವ ಪ್ರಣಾಳಿಕೆಯನ್ನು ಮಂಡಿಸಲಾಗುತ್ತದೆ. ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡುವ ಪ್ರಣಾಳಿಕೆಗಳಲ್ಲಿ ಯುವ ಪ್ರಣಾಳಿಕೆ ಒಂದಾಗಬೇಕು ಎಂದ ಅವರು, ಮುಂದಿನ ವಿಧಾನಸಭಾ ಚುನಾವಣೆಯ ಪೂರಕವಾಗಿ ನಮ್ಮ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಈ ಯುವ ಅಧಿವೇಶನದಲ್ಲಿ 10 ಸಾವಿರಕ್ಕೂ ಅಧಿಕ ಯುವಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಬೇಡಿಕೆಗಳು:
-ಕೇಂದ್ರ ಮತ್ತು ರಾಜ್ಯ ಸರಕಾರ ಎಲ್ಲ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. -ಗುತ್ತಿಗೆ, ದಿನಗೂಲಿ, ತಾತ್ಕಾಲಿಕ, ಅತಿಥಿ ನೌಕರರ ಎಲ್ಲರನ್ನು ಖಾಯಂ ಮಾಡಬೇಕು. -ದೇಶದ ಎಲ್ಲ ಬ್ಯಾಂಕ್‌ಗಳಲ್ಲಿ ಶೇ.5 ರಷ್ಟು ಉದ್ಯಮಶೀಲ ಯುವಕರಿಗೆ ಸಾಲ ನೀಡಬೇಕು. -ಸರಕಾರದ ಕೌಶಲ್ಯ ತರಬೇತಿ ಯೋಜನೆಯಲ್ಲಿ ನೋಂದಾಯಿಸಿಕೊಂಡವರಿಗೆ ಉದ್ಯೋಗ ನೀಡಬೇಕು.







