ತತ್ವಪದ ಜಾತಿ ಪದ್ಧತಿಯ ಪ್ರಥಮ ವಿರೋಧಿ: ಡಾ.ರಹಮತ್ ತರೀಕೆರೆ

ಚಿತ್ರದುರ್ಗ, ನ.4: ಗುಡಿ, ಚರ್ಚ್ ಮಸೀದಿಗಳನ್ನು ಬಿಟ್ಟು ಹೊರಬನ್ನಿ ಎಂದು ಕವಿ ಕುವೆಂಪು ಹೇಳುವು ದಕ್ಕಿಂತಲೂ ಮೊದಲು ಜಾತಿ ಪದ್ಧತಿಗಳನ್ನು ಮುರಿಯ ಬೇಕೆಂದು ಕರೆ ನೀಡಿದ್ದು ತತ್ವ ಪದಗಳು ಎಂದು ಡಾ. ರಹಮತ್ ತರೀಕೆರೆ ಹೇಳಿದ್ದಾರೆ.
ಅವರು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಹಾಗೂ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರ ಚಿತ್ರದುರ್ಗ ಇವರ ಸಹಯೋಗದೊಂದಿಗೆ ಕ್ರೀಡಾ ಭವನದಲ್ಲಿ ಶನಿವಾರ ನಡೆದ ತತ್ವಾನುಸಂಧಾನ ಹಾಗೂ ಚಿತ್ರದುರ್ಗ ಜಿಲ್ಲಾ ತತ್ವಪದ ಸಂಪುಟಗಳ ಅವಲೋಕನ ಸಮಾರಂಭದಲ್ಲಿ ತತ್ವಾನುಸಂಧಾನ ತತ್ವ ಸಮೀಕ್ಷೆ ಕುರಿತು ಮಾತನಾಡಿದರು.
ದಲಿತರಿಗೆ ಚಳವಳಿಯನ್ನು ಕೊಟ್ಟಿದ್ದು ತತ್ವ ಪರಂಪರೆ, ಆರೂಢ ಪರಂಪರೆ. ಶಾಸ್ತ್ರ ವೇದಗಳೇ ಶ್ರೇಷ್ಠ ಎನ್ನುವ ಕಾಲಘಟ್ಟದಲ್ಲಿ ತತ್ವಪದಕಾರರು ಹಾಗೂ ವಚನಕಾರರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ತತ್ವಪದಕಾರರೆಂದರೆ ದುಡಿಮೆ ಮಾಡುವವರು ಎಂದರ್ಥ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ಶಾಸ್ತ್ರ ಪುರಾಣದಿಂದ ಹೊರಗಿರುವ ತತ್ವಪದಕಾರರು ಯಾವ ಪ್ರಚಾರವನ್ನು ಬಯಸದೆ ಹಳ್ಳಿ ಹಳ್ಳಿಗಳಲ್ಲಿ ಈಗಲೂ ತತ್ವಪದಗಳನ್ನು ಹಾಡುತ್ತ ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡಿಕೊಂಡು ಬರುತ್ತಿ ದ್ದಾರೆ. ಯುವ ಪೀಳಿಗೆಗೆ ತತ್ವಪದಗಳು ಎಷ್ಟರ ಮಟ್ಟಿಗೆ ನಾಟಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವಂತ ಸನ್ನಿವೇಶ ಎದುರಾಗಿರುವುದನ್ನು ಪ್ರತಿಯೊಬ್ಬರು ಗಂಭೀರವಾಗಿ ಚಿಂತಿಸಬೇಕಿದೆ ಎಂದರು.
ನೂರಾರು ದೇವತೆಗಳಿಗೆ ಕುರಿ, ಕೋಳಿ, ಕೋಣಗಳನ್ನು ಬಲಿನೀಡಿ ನಂತರ ಆಹಾರವನ್ನಾಗಿ ಸೇವಿಸುವವರು ಶೇ.85 ರಷ್ಟು ಜನರಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸ ಸೇವಿಸಿ ಧರ್ಮಸ್ಥಳಕ್ಕೆ ಹೋಗುತ್ತೇನೆಂದು ಹೇಳಿರುವುದು ದೊಡ್ಡ ಪಾಪ ಎಂಬ ನಂಬಿಕೆಯನ್ನು ಶೇ.15 ರಷ್ಟು ಮಂದಿ ಹುಟ್ಟಿಸುತ್ತಿರುವುದು ಮಹಾ ಪಾಪ ಎಂದು ಮರುಳಸಿದ್ದಪ್ಪ ಸಂಘಪರಿವಾರಕ್ಕೆ ತಿರುಗೇಟು ನೀಡಿದರು.
ಸಂಪುಟಗಳ ಅವಲೋಕನ ಹೊನ್ನೇನಹಳ್ಳಿ ದಾಸಗಿರಿಯಪ್ಪ, ಸಕ್ರಪ್ಪತಾತ ಮತ್ತು ಇತರ ತತ್ವಪದಗಳ ಬಗ್ಗೆ ಮಾತನಾಡಿದ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪಮಾಳಿಗೆ ತತ್ವಪದಗಳು ಮನುಷ್ಯನಲ್ಲಿ ಜ್ಞಾನ, ಅರಿವು, ಜಾಗೃತಿಯನ್ನು ಎಚ್ಚರಿಸುತ್ತಿವೆ. ಪಟ್ಟಣದವರಿಗಿಂತ ಹಳ್ಳಿಯವರಿಗೆ ಪುಸ್ತಕಗಳ ನಂಟು ಹೆಚ್ಚಾಗಿರುವುದರಿಂದ ಒಂದು ಕಡೆ ಸೀಮಿತವಾಗಬಾರದು. ಲೋಕಕ್ಕೆ ಸಿಗಬೇಕು. ಜ್ಞಾನದ ಜೊತೆ ಅನುಸಂಧಾನ ಆದಾಗ ಮಾತ್ರ ತತ್ವಪದಗಳಿಗೆ ನಿಜವಾದ ಶಕ್ತಿ ಸಿಗುತ್ತದೆ ಎಂದರು.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ, ಕನಕದಾಸರ ಸಾಹಿತ್ಯವನ್ನು ಹದಿನೈದು ಬಾಷೆಗಳಲ್ಲಿ ಅನುವಾದ ಮಾಡಲಾಗುವುದು. ಕನಕದಾಸರ ಜೀವನ ಕೀರ್ತನೆಯನ್ನು ಇಟ್ಟುಕೊಂಡು ಮಕ್ಕಳಿಗೆ ಪರಿಚಯಿಸಲಾಗುವುದರ ಜೊತೆ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಕನಕ ಓದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ತತ್ವಾನುಸಂಧಾನ ಅನುಭಾವ ಪರಂಪರೆ ಕುರಿತು ಡಾ.ಜಿ.ವಿ.ಆನಂದಮೂರ್ತಿ ಉಪನ್ಯಾಸ ನೀಡಿ ಕನ್ನಡಕ್ಕೆ ಅನುಬಾವಿ ಪರಂಪರೆಯಿದೆ ಎಂದರು. ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ ವೇದಿಕೆಯಲ್ಲಿದ್ದರು. ಕಾಂತರಾಜ್ ವದ್ದಿಕೆರೆ, ಯರ್ರಿಸ್ವಾಮಿ ತುರುವನೂರು, ನರಸಿಂಹಮೂರ್ತಿ ದೊಡ್ಡಗಟ್ಟ ವಿಶೇಷ ಆಹ್ವಾನಿತ ಅನುಭಾವಿಗಳಾಗಿ ಆಗಮಿಸಿ ತತ್ವಪದಕಾರರ ಕುರಿತು ಮಾತನಾಡಿದರು.
ಬಳಿಕ ಸಿ.ಎನ್.ಮಾಳಿಗೆ ವೆಂಕಟೇಶ್ ಮತ್ತು ತಂಡ, ಕುಂಚಿಗನಾಳ್‌ನ ಓಂಕಾರಪ್ಪಮತ್ತು ತಂಡ ತತ್ವಪದ ಗಾಯನ ನಡೆಸಿಕೊಟ್ಟರು.







