ಭತ್ತ ಸಿರಿಧಾನ್ಯವೆಂದು ಪರಿಗಣಿಸಲು ಒತ್ತಾಯಿಸಲಾಗುವುದು: ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ

ಚಿಕ್ಕಮಗಳೂರು, ನ.4: ಮಳೆ ಆಶ್ರಯ ಭತ್ತವನ್ನು ಸಿರಿಧಾನ್ಯ ಎಂದು ಪರಿಗಣಿಸುವಂತೆ ಜನವರಿಯಲ್ಲಿ ನಡೆಯುವ ರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಒತ್ತಾಯಿಸಲಾಗುವುದು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಹೇಳಿದ್ದಾರೆ.
ಅವರು ಶನಿವಾರ ಕರ್ನಾಟಕ ಕೃಷಿ ಬೆಲೆ ಆಯೋಗ ಬೆಂಗಳೂರು, ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಹಾಗೂ ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ ಇವರ ಸಂಯುಕ್ತಾಶ್ರಯದಲ್ಲಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ‘ಮಳೆ ಆಶ್ರಯ ಭತ್ತದ ಉತ್ಪಾದನೆ ಮತ್ತು ಮಾರುಕಟ್ಟೆ ಸದೃಡಗೊಳಿಸುವಿಕೆ’ ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ಭತ್ತದ ಉತ್ಪಾದನೆಯ ವೈಜ್ಞಾನಿಕ ಲೆಕ್ಕಾಚಾರ ಆಗಬೇಕಾಗಿದೆ. ಕೇಂದ್ರ ಘೋಷಿಸಿರುವ 1 ಕ್ವಿಂಟಾಲ್ ಭತ್ತಕ್ಕೆ 1,550 ರೂ.ಯಾಗಿದೆ. ಇದನ್ನು ಬೆಂಬಲ ಬೆಲೆಯಿಲ್ಲದೆ ಭತ್ತವನ್ನು ಬೆಳೆಯಬಲ್ಲ ಪಂಜಾಬ್‌ನಂತಹಾ ನೀರಾವರಿ ಹೊಂದಿರುವ ರಾಜ್ಯ ಸುಭವಾಗಿ ಒಪ್ಪಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ಮಳೆ ಆಶ್ರಯಿಸಿ ಭತ್ತ ಬೆಳೆಯುವುದರಿಂದ ಇಲ್ಲಿನ ರೈತರಿಗೆ ಅನಾನುಕೂಲ ಹೆಚ್ಚು ಎಂದರು.
ಕಾರ್ಯಕ್ರಮವನ್ನು ರೈತ ಮುಖಂಡ ಕೆ.ಪಿ.ಗಂಗಾಧರ ಉದ್ಘಾಟಿಸಿ ಮಾತನಾಡಿ, ರೈತರು ಉತ್ಪಾದಕರೂ ಹೌದು ಗ್ರಾಹಕರೂ ಹೌದು. ಸರಕಾರ ಬೆಂಬಲ ಬೆಲೆ ಘೋಷಿಸುವಾಗ ಭತ್ತಕ್ಕೆ ಆದ್ಯತೆ ನೀಡಬೇಕು. ಭತ್ತವನ್ನು ಸಿರಿಧಾನ್ಯವೆಂದು ಪರಿಗಣಿಸಿದರೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಬಹುದು ಎಂದರು.
ತಾಂತ್ರಿಕ ಸಮಾವೇಶದಲ್ಲಿ ‘ಭತ್ತದ ಬೆಳೆಗೆ ಸರಕಾರದ ಕನಿಷ್ಠ ಬೆಂಬಲ ಬೆಲೆ ಹಾಗೂ ಜಿಲ್ಲೆಯಲ್ಲಿ ಭತ್ತದ ಖರೀದಿ’ ವಿಷಯದ ಕುರಿತು ಎಪಿಎಂಸಿ ಮಾರ್ಕೆಟಿಂಗ್ ಅಸಿಸ್ಟೆಂಟ್ ಎನ್. ವಿ. ಶಿವಕುಮಾರ್, ‘ಮಳೆ ಆಶ್ರಿತ ಭತ್ತದ ಉತ್ಪಾದನಾ ವೆಚ್ಚ ಲೆಕ್ಕಾಚಾರ’ ಕುರಿತು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೈ.ಎಸ್. ರಮೇಶ್, ‘ಸಿರಿಧಾನ್ಯವಾಗಿ ಮಳೆ ಆಶ್ರಯ ಭತ್ತದ ಅಭಿವೃದ್ಧಿ’ ಕುರಿತು ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಾಂತೀಯ ಸಾವಯವ ಒಕ್ಕೂಟದ ಅಧ್ಯಕ್ಷ ಅನಿಲ್ ರಾಜ್ ಡಿ.ಎಂ., ‘ಮಳೆ ಆಶ್ರಿತ ಭತ್ತದ ಸುಧಾರಿತ ತಳಿಗಳು ಹಾಗೂ ನಾಟಿ ತಳಿಗಳ ಸಂರಕ್ಷಣೆ’ ಕುರಿತು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ದುಶ್ಯಂತ್ ಕುಮಾರ್, ‘ಸಿರಿಧಾನ್ಯವಾಗಿ ಮಳೆ ಆಶ್ರಯ ಭತ್ತದ ಅಭಿವೃದ್ಧಿ’ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಎಂ.ಸಿ. ಸೀತಾ, ಮೂಡಿಗೆರೆ ತೋಟಗಾರಿಕಾ ಕಾಲೇಜಿನ ಮುಖ್ಯಸ್ಥ ಡಾ. ಎಂ. ಹನುಮಂತಪ್ಪ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್. ಗೌಡ, ಸಂಶೋಧನಾ ನಿರ್ದೇಶಕ ಎಂ.ಕೆ. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.







