ಟಿಪ್ಪು ಜಯಂತಿಗೆ ಹೋಗಲ್ಲ: ಈಶ್ವರಪ್ಪ
ಶಿವಮೊಗ್ಗ, ನ.4: ಟಿಪ್ಪುಜಯಂತಿ ಆಚರಣೆಯಲ್ಲಿ ಶಿಷ್ಟಾಚಾರದಂತೆ ಸರಕಾರ ತನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದರೂ ಕಾರ್ಯಕ್ರಮಕ್ಕೆ ತಾನು ಹೋಗುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಟಿಪ್ಪು ಸಾವಿರಾರು ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾನೆ ಇಂತಹ ಒಬ್ಬ ವ್ಯಕ್ತಿಯ ಜಯಂತಿ ಆಚರಿಸುವುದು ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದರು.
ಬೇಲಿಕೇರಿ ಅಕ್ರಮ ಅದಿರು ಸಾಗಾಟ ಪ್ರಕರಣವನ್ನು ಎಸ್‌ಐಟಿ ಮೂಲಕ ತನಿಖೆ ನಡೆಸಲು ಮುಂದಾಗಿರುವ ರಾಜ್ಯ ಸರಕಾರಕ್ಕೆ ಬಿಜೆಪಿ ಹೆದರುವುದಿಲ್ಲ. ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಕೆಲಸ ಮಾಡಬಾರದು. ಬೇಲಿಕೇರಿ ಅಕ್ರಮ ಅದಿರು ಸಾಗಾಟ ಪ್ರಕರಣವನ್ನು ಈಗಾಗಲೇ ಸಿಬಿಐ ಕೈಬಿಟ್ಟಿದೆ. ಆದರೆ ರಾಜ್ಯ ಸರಕಾರ ಮತ್ತೆ ಎಸ್‌ಐಟಿ ತನಿಖೆಗೆ ಮುಂದಾಗಿರುವುದು ಬೆದರಿಕೆಯ ತಂತ್ರವಾಗಿದೆ. ಇದಕ್ಕೆ ಬಿಜೆಪಿ ಹೆದರುವುದಿಲ್ಲ ಎಂದು ತಿಳಿಸಿದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಮೂರು ತಿಂಗಳ ಒಳಗೆ ಗಣಪತಿ ಆತ್ಮಹತ್ಯೆಯ ತನಿಖಾವರದಿ ಸಲ್ಲಿಸಲು ಹೇಳಿದೆ. ಸಿಬಿಐ ಪ್ರಕರಣ ದಾಖಲಿಸಿದೆ. ಆದರೂ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿಲ್ಲ. ಈ ಹಿಂದೆ ಸಿಐಡಿ ಪ್ರಕರಣ ದಾಖಲಿಸಿದಾಗ ಸಿಎಂ ಸಿದ್ದರಾಮಯ್ಯ ಕೇವಲ ನಾಟಕಕ್ಕಾಗಿ ಕೆ.ಜೆ.ಜಾರ್ಜ್‌ರಿಂದ ರಾಜೀನಾಮೆ ಪಡೆದಿದ್ದರು ಎಂದು ಟೀಕಿಸಿದರು.
ನಂತರ ಜಾರ್ಜ್ ಸಿಐಡಿ ನಿಂದ ಕ್ಲೀನ್ ಚೀಟ್ ಪಡೆದರು. ಆಗ ಮತ್ತೊಮ್ಮೆ ಸಿದ್ದರಾಮಯ್ಯ ಜಾರ್ಜ್ ಅವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಜಾರ್ಜ್ ರವರು ತಾವಾಗಿಯೇ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವ ತನಕ ತಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಬಿಜೆಪಿಯ ಮುಖಂಡರಾದ ದತ್ತಾತ್ರಿ, ಬಿಳಕಿ ಕೃಷ್ಣಮೂರ್ತಿ, ಮಾಜಿ ಶಾಸಕ ಕುಮಾರ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.







