ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಮೇರಿಕೋಮ್ ಸೆಮಿಫೈನಲ್‌ಗೆ

ವಿಯೆಟ್ನಾಂ, ನ.4: ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ಆರನೆ ಪದಕವನ್ನು ದೃಢಪಡಿಸಿದ್ದಾರೆ.
ಮೇರಿಕೋಮ್ ಜೊತೆಗೆ ಶಿಕ್ಷಾ(54ಕೆಜಿ) ಹಾಗೂ ಪ್ರಿಯಾಂಕಾ ಚೌಧರಿ(60ಕೆಜಿ)ಕೂಡ ಪದಕ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ವಿಜೇತೆ ಮೇರಿ ಕೋಮ್ ಶನಿವಾರ ನಡೆದ 48 ಕೆಜಿ ಲೈಟ್ ಫ್ಲೈವೇಟ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಮೆಂಗ್ ಚಿ ಪಿನ್‌ರನ್ನು ಮಣಿಸಿದರು. 34ರ ಹರೆಯದ ಮೇರಿಕೋಮ್ ಈ ಹಿಂದೆ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಚಿನ್ನ ಹಾಗೂ 1 ಬೆಳ್ಳಿ ಪದಕ ಜಯಿಸಿದ್ದಾರೆ. ಸೆಮಿ ಫೈನಲ್‌ನಲ್ಲಿ ಜಪಾನ್‌ನ ಸುಬಾಸಾ ಕೊಮುರಾರನ್ನು ಎದುರಿಸಲಿದ್ದಾರೆ.
ಕಳೆದ ವರ್ಷ ಒಲಿಂಪಿಕ್ಸ್ ಅರ್ಹತಾ ಸುತ್ತಿನಿಂದ ಹೊರಗುಳಿದಿದ್ದ ಮೇರಿಕೋಮ್ ಒಂದು ವರ್ಷದ ಬಳಿಕ ಪದಕವನ್ನು ಖಚಿತಪಡಿಸಿದ್ದು ಈ ಮೂಲಕ ಆತ್ಮವಿಶ್ವಾಸ ಹೆಚ್ಚಿ ಸಿಕೊಂಡಿದ್ದಾರೆ.
ರೈಲ್ವೇಸ್ ಸ್ಪೋರ್ಟ್ಸ್ ಪ್ರೊಮೊಶನ್ ಬೋರ್ಡ್‌ನ ಬಾಕ್ಸರ್ ಶಿಕ್ಷಾ ಕ್ವಾರ್ಟರ್‌ಫೈನಲ್‌ನಲ್ಲಿ ಉಝ್ಬೇಕಿಸ್ತಾನದ ಫೆರಾಂಗಿಝ್ ಖೊಶಿಮೊವಾರನ್ನು ಮಣಿಸಿದರು. ಮತ್ತೊಂದು ಅಂತಿಮ-8ರ ಪಂದ್ಯದಲ್ಲಿ ಪ್ರಿಯಾಂಕಾ ಶ್ರೀಲಂಕಾದ ದುಲಾಂಜನಿ ಅವರನ್ನು 5-0 ಅಂತರದಿಂದ ಸೋಲಿಸಿದರು.
ಇದೇ ವೇಳೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸವೀಟಿ ಬೂರಾ(75ಕೆಜಿ)ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ವಿಜೇತೆ ಲಿನ್ ಕ್ವಿಯಾನ್ ವಿರುದ್ಧ 0-5 ಅಂತರದಿಂದ ಸೋಲುವುದರೊಂದಿಗೆ ಟೂರ್ನಿಯಿಂದ ಹೊರಗುಳಿದಿದ್ದಾರೆ.







