ಬ್ರಹ್ಮಾವರದಲ್ಲಿ ಪ.ಪೂ.ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟ
32 ಜಿಲ್ಲೆಗಳ 2500 ಮಂದಿ ಕ್ರೀಡಾಪಟುಗಳ ಸ್ಪರ್ಧೆ
ಉಡುಪಿ, ನ.4: ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಬ್ರಹ್ಮಾವರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟ ನ.11ರಿಂದ 13ರವರೆಗೆ ಬ್ರಹ್ಮಾವರದ ಎಸ್‌ಎಂಎಸ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ವಿಜಯಲಕ್ಷ್ಮೀ ಬಿ. ನಾಯಕ್ ತಿಳಿಸಿದ್ದಾರೆ.
ಶನಿವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಈ ಕ್ರೀಡಾಕೂಟದಲ್ಲಿ ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳ ಸುಮಾರು 2,500 ವಿದ್ಯಾರ್ಥಿ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಬಾಲಕರ ವಿಭಾಗದಲ್ಲಿ 20 ಹಾಗೂ ಬಾಲಕಿಯರ ವಿಭಾಗದಲ್ಲೂ 20 ಸ್ಪರ್ಧೆಗಳು ನಡೆಯಲಿವೆ ಎಂದವರು ತಿಳಿಸಿದರು.
ಬ್ರಹ್ಮಾವರದ ಎಸ್‌ಎಂಎಸ್ ಪ.ಪೂ.ಕಾಲೇಜು ರಾಜ್ಯಮಟ್ಟದ ಕ್ರೀಡಾಕೂಟದ ಆತಿಥೇಯತ್ವವನ್ನು ವಹಿಸುತ್ತಿರುವುದು ಇದು ಎರಡನೇ ಸಲವಾಗಿದೆ. ಈ ಹಿಂದೆ 2005ರಲ್ಲಿ ಬ್ರಹ್ಮಾವರದಲ್ಲಿ ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿತ್ತು ಎಂದು ಎಸ್‌ಎಂಎಸ್ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸತ್ಯನಾರಾಯಣ ನಾಯಕ್ ವಿವರಿಸಿದರು.
ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸ ಲಾಗಿದೆ. ಕ್ರೀಡಾಕೂಟದ ಯಶಸ್ಸಿಗೆ 200 ಮಂದಿ ತಾಂತ್ರಿಕ ಅಧಿಕಾರಿಗಳು, 200 ಮಂದಿ ಸ್ವಯಂಸೇವಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಹೊರ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಹಾಗೂ ಅಧಿಕಾರಿಗಳಿಗೆ ಎಸ್‌ಎಂಎಸ್ ಪಿಯು ಕಾಲೇಜು, ಎಸ್‌ಎಂಎಸ್ ಕಾಲೇಜು, ಸರಕಾರಿ ಪ.ಪೂ.ಕಾಲೇಜು ಬ್ರಹ್ಮಾವರ, ನಿರ್ಮಲ ಪ.ಪೂ.ಕಾಲೇಜು ಬ್ರಹ್ಮಾವರ, ಎಸ್‌ಎಂಎಸ್ ಸಿಬಿಎಸ್‌ಇ ಬ್ರಹ್ಮಾವರ ಹಾಗೂ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಕ್ರೀಡಾಕೂಟವನ್ನು ನ.11ರ ಶನಿವಾರ ಸಂಜೆ 4:00ಗಂಟೆಗೆ ರಾಜ್ಯ ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಧ್ವಜಾರೋಹಣ ನೆರವೇರಿಸಿದರೆ, ಒಎಸ್‌ಸಿ ವಿದ್ಯಾಸಂಸ್ಥೆಗಳ ಸಂಚಾಲಕ ವಂ. ಸಿ.ಎ.ಐಸಾಕ್ ಆಶೀರ್ವಚನ ನೀಡಲಿದ್ದಾರೆ.
ಕಾರ್ಪೋರೇಶನ್ ಬ್ಯಾಂಕಿನ ಅಂತಾರಾಷ್ಟ್ರೀಯ ಕ್ರೀಡಾಪಟು ಪುರಂದರ ಅವರು ಕ್ರೀಡಾಜ್ಯೋತಿಯನ್ನು ಪ್ರಜ್ವಲಿಸಲಿದ್ದಾರೆ. ನ.13ರ ಅಪರಾಹ್ನ 3:30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವ ಸಚಿವ ಪ್ರಮೋದ್ ಮಧ್ವರಾಜ್ ವಿಜೇತರಿಗೆ ಬಹುಮಾನ ವಿತರಿಸುವರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸಮಗ್ರ ಪ್ರಶಸ್ತಿಯನ್ನು ನೀಡವರು.
ಸುದ್ದಿಗೋಷ್ಠಿಯಲ್ಲಿ ಎಸ್‌ಎಂಎಸ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಐವಾನ್ ದೊನಾತ್ ಸುವಾರಿಸ್, ಪ.ಪೂ.ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್, ಉಡುಪಿ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಶರತ್‌ರಾವ್ ಹಾಗೂ ಕೊಕ್ಕರ್ಣೆ ಸರಕಾರಿ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದರು.







