ವಿಜ್ಞಾನಿ ಹರೀಶ್ ಆರ್. ಭಟ್ ನಿಧನ

ಉಡುಪಿ, ನ. 4: ದೇಶದ ಖ್ಯಾತನಾಮ ಪರಿಸರ ವಿಜ್ಞಾನಿ, ಸಸ್ಯ ಮತ್ತು ಪಕ್ಷಿ ತಜ್ಞ, ಪರಿಸರ ಜೀವರಾಶಿಗಳ ತಜ್ಞರಾಗಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್‌ನ ಸಂಶೋಧಕ ವಿಜ್ಞಾನಿ ಹರೀಶ್ ಆರ್. ಭಟ್ ಇಂದು ಬೆಳಗ್ಗೆ ಹಠಾತ್ ನಿಧನರಾದರು. ಅವರಿಗೆ 47 ವರ್ಷ ಪ್ರಾಯವಾಗಿತ್ತು.
ಉಡುಪಿ ಜಿಲ್ಲೆಯ ಉದ್ಯಾವರದವರಾದ ಹರೀಶ್ ಭಟ್, ಪತ್ನಿ ಹಾಗೂ 6 ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಅವರು ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ಪ್ರದರ್ಶನ ವೊಂದಕ್ಕೆ ಪೂರ್ವ ತಯಾರಿಯಲ್ಲಿದ್ದಾಗ ಮಿದುಳಿನ ತೀವ್ರ ರಕ್ತಸ್ರಾವಕ್ಕೊಳಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ನಿಧನರಾದರು.
ಪರಿಸರ, ಸಸ್ಯ ಹಾಗೂ ಪಕ್ಷಿಗಳಿಗೆ ಸಂಬಂಧಿಸಿದಂತೆ ಬಹುದೊಡ್ಡ ವಿಜ್ಞಾನಿಯಾದರೂ, ಸರಳ ಸಜ್ಜಿಕೆಯ ವ್ಯಕ್ತಿತ್ವವನ್ನು ಹೊಂದಿದ್ದ ಹರೀಶ್, ಹೆಚ್ಚಾಗಿ ಎಲೆಮರೆಯ ಕಾಯಿಯಂತೆ ಇದ್ದವರು. ಮೂಲತಃ ಇನ್ನಂಜೆ ಉಂಡಾರುವಿನ ರಾಮಕೃಷ್ಣ ಭಟ್ ಹಾಗೂ ಸುಮತಿ ಆರ್. ದಂಪತಿ ಪುತ್ರ. ಆರಂಭಿಕ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಮಾಡಿದರೂ, ಮುಂದೆ ಹೆತ್ತವರೊಂದಿಗೆ ಉದ್ಯಾವರಕ್ಕೆ ಬಂದು ನೆಲೆ ನಿಂತ ಮೇಲೆ ಬೋರ್ಡ್ ಹೈಸ್ಕೂಲ್, ಕ್ರಿಶ್ಚಿಯನ್ ಹೈಸ್ಕೂಲ್ ಹಾಗೂ ಎಂಜಿಎಂ ಕಾಲೇಜುಗಲ್ಲಿ ಮುಂದಿನ ಶಿಕ್ಷಣ ಪಡೆದಿದ್ದರು.
ದೇಶದ ಉನ್ನತ ವಿಜ್ಞಾನ ಸಂಸ್ಥೆಯಾದ ಐಐಎಸ್‌ಸಿ ಸೇರಿದ ಅವರು ಸಂಶೋಧನಾ ವಿಜ್ಞಾನಿಯಾಗಿ ಕಳೆದ 20 ವರ್ಷಗಳಿಂದ ಪಶ್ಚಿಮ ಘಟ್ಟದ ಪರಿಸರದಲ್ಲಿ ವಿವಿಧ ವಿಷಯಗಳ ಕುರಿತು ಸಂಶೋಧನೆಯಲ್ಲಿ ನಿರತರಾಗಿದ್ದರು. ಇವುಗಳಲ್ಲಿ ಪಶ್ಚಿಮ ಘಟ್ಟದ ಜೀವವೈವಿಧ್ಯತೆ ಸಂರಕ್ಷಣೆ, ಇಕೋಲಜಿ, ವನ್ಯಜೀವಿ ಜೀವಶಾಸ್ತ್ರ, ವೆಟ್‌ಲ್ಯಾಂಡ್, ಪ.ಘಟ್ಟದ ಸಸ್ಯವೈವಿದ್ಯತೆ ಕುರಿತಂತೆ ಆಳವಾದ ಅಧ್ಯಯನ ನಡೆಸಿದ್ದರು.
ಅವರು ಬಯೋಲಜಿಕಲ್ ಡೈವರ್ಸಿಟಿ ಬಿಲ್ ಡ್ರಾಫ್ಟ್ ಕುರಿತು 2000ರಲ್ಲಿ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಸಮನ್ವಯಕಾರರಾಗಿದ್ದರು. ಚಾರ್ಮಾಡಿ ಮೀಸಲು ಅರಣ್ಯದಲ್ಲಿ ಎಚ್‌ಪಿಸಿಎಲ್ ಪೈಪ್‌ಲೈನ್ ಹಾಕುವ ವೇಳೆಯಲ್ಲಿ ಪ್ರಿನ್ಸಿಪಲ್ ಇನ್‌ವೆಸ್ಟಿಗೇಟರ್ ಆಗಿ ಸರಕಾರಕ್ಕೆ ಅಸೆಸ್‌ಮೆಂಟ್ ರಿಪೋರ್ಟ್ ನೀಡಿದ್ದರು. ಕುದುರೆಮುಖ ನ್ಯಾಶನಲ್ ಪಾರ್ಕ್ ಪರಿಸರದ ಕುರಿತ ವರದಿಯ ತಂಡದ ಸದಸ್ಯರಾಗಿದ್ದರು.
ಜೀವವೈವಿಧ್ಯತೆಯ ಕುರಿತಂತೆ ಅಧಿಕೃತ ಕಾರ್ಯಕ್ರಮದ ಮೂಲಕ 24 ಜಿಲ್ಲೆಗಳ 20 ಸಾವಿರ ಶಾಲೆಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಸಿದ್ದರು. ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್‌ನಲ್ಲೂ ಅವರು ತಮ್ಮನ್ನು ತೊಡಗಿಸಿ ಕೊಂಡಿದ್ದರು. ಹುಬ್ಬಳ್ಳಿ-ಅಂಕೋಲ ರೈಲ್ವೆಯಿಂದ ಪರಿಸರಕ್ಕೆ ಆಗುವ ಪರಿಣಾಮಗಳ ಕುರಿತ ಅಧ್ಯಯನ ತಂಡದ ಸದಸ್ಯರಾಗಿ, ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್‌ನಲ್ಲಿ ಜೀವವೈವಿಧ್ಯತೆ ಮ್ಯಾಪಿಂಗ್ ಸದಸ್ಯರಾಗಿ, ಬೆಂಗಳೂರಿನಲ್ಲಿ ವೈಲ್ಡ್‌ಲೈಫ್ ವಾರ್ಡನ್, ಬಿಬಿಎಂಪಿ ಬಯೋಡೈವರ್ಸಿಟಿ ಮ್ಯಾನೇಜ್‌ಮೆಂಟ್ ಕಮಿಟಿ ಸದಸ್ಯರಾಗಿ ಅವರು ಕಾರ್ಯನಿರ್ವಹಿಸಿದ್ದರು.
ರಾಜ್ಯ ಸರಕಾರದ ವೆಟ್‌ಲ್ಯಾಂಡ್ ಕನ್ಸರ್ವೇಶನ್ ಕಮಿಟಿ ಸದಸ್ಯ, ರಾಜ್ಯ ಸರಕಾರದ ಸಿಬಿಎಸ್‌ಇ ಸಿಲೆಬಸ್ ಸಮಿತಿಯ ಪಠ್ಯಪುಸ್ತಕ ನಿರ್ದೇಶಕರಾಗಿದ್ದರು. ಸಂಶೋಧಕರಾಗಿ ಅವರು ವಿಜ್ಞಾನ ಹಾಗೂ ತಾಂತ್ರಿಕ ಸಂಶೋಧನಾ ಪ್ರಬಂಧ ಗಳನ್ನು ದೇಶ-ವಿದೇಶಗಳ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿ ಅಂತಾರಾಷ್ಟ್ರೀಯ ವುಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದರು.
ಕೇಂದ್ರ ಸಚಿವ ಅನಂತಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯಕುಮಾರ್ ಸೊರಕೆ, ಆಳ್ವಾಸ್ ಸಂಸ್ಥೆಯ ಡಾ.ಮೋಹನ್ ಆಳ್ವ ಮುಂತಾದವರು ಇಂದು ಅವರ ಅಂತಿಮ ದರ್ಶನ ಪಡೆದವರಲ್ಲಿ ಸೇರಿದ್ದಾರೆ.







