ನ. 9ರಿಂದ 12ರ ವರೆಗೆ ‘ಪವಿತ್ರಾತ್ಮ ಅಭಿಷೇಕೋತ್ಸವ 2017’ ಸಮ್ಮೇಳನ
ಲಾಂಛನ ಬಿಡುಗಡೆ

ಮಂಗಳೂರು, ನ. 4: ಕಥೋಲಿಕ್ ಧರ್ಮಸಭೆಯಲ್ಲಿ ಕ್ಯಾರಿಜ್ಮ್ಯಾಟಿಕ್ ನವೀಕರಣದ ಸ್ವರ್ಣ ಮಹೋತ್ಸವದ ಅಂಗವಾಗಿ ‘ಪವಿತ್ರಾತ್ಮ ಅಭಿಷೇಕೋತ್ಸವ 2017’ ಸಮ್ಮೇಳನವು ನಗರದ ರೊಜಾರಿಯೋ ಕೆಥೆಡ್ರಲ್‌ನಲ್ಲಿ ನ.9ರಿಂದ 12ರ ನರೆಗೆ ಸಂಜೆ 4 ಗಂಟೆಯಿಂದ ರಾತ್ರಿ 8ಗಂಟೆಯ ವರೆಗೆ ನಡೆಯಲಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪೌಲ್ ಡಿಸೋಜ ಹೇಳಿದ್ದಾರೆ.
ನಗರದ ಬಿಷಪ್ ಹೌಸ್‌ನಲ್ಲಿ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ರಾಜ್ಯದ 14 ಧರ್ಮಪ್ರಾಂತ್ಯಗಳಿಂದ ಧರ್ಮಾಧ್ಯಕ್ಷರು, ಧರ್ಮಗುರುಗಳು, ಧರ್ಮಭಗಿನಿಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಕಳೆದ ಐವತ್ತು ವರ್ಷಗಳಲ್ಲಿ ಕ್ಯಾರಿಜ್ಮ್ಯಾಟಿಕ್ ಸಂಚಲನದಿಂದಾಗಿ ಕಥೋಲಿಕ್ ಧರ್ಮಸಭೆಯಲ್ಲಿ ಅಪಾರ ಬೆಳವಣಿಗೆ ನಡೆದಿದೆ. ಜನರ ಆಧ್ಯಾತ್ಮಿಕ ಜೀವನದಲ್ಲಿ ಹೊಸ ಉತ್ಸಾಹ ಬಂದಿದೆ. ಈ ಎಲ್ಲ ಒಳಿತಿಗಾಗಿ ದೇವರಿಗೆ ಕತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಸಮ್ಮೇಳನದ ಸಂಚಾಲಕ ಒನಿಲ್ ಡಿಸೋಜ ಸಮ್ಮೇಳನದ ಮಾಹಿತಿ ನೀಡಿ, ನ.9ರಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪೌಲ್ ಡಿಸೋಜ ಸಂಜೆ 4.45ಕ್ಕೆ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ನ.10ರಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫ್ರಾನ್ಸಿಸ್ ಸೆರಾವೊ ಮತ್ತು ನ.11ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕ್ಕುಳಿ ಅವರು ಬಲಿಪೂಜೆ ಅರ್ಪಿಸಲಿದ್ದಾರೆ. ನ.12ರಂದು ಸಂಜೆ 6ಗಂಟೆಗೆ ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಮಹಾ ಧರ್ಮಾಧ್ಯಕ್ಷ ಅ.ವಂ.ಡಾ.ಬರ್ನಾಡ್ ಮೊರಾಸ್ ಸಮಾರೋಪ ಬಲಿಪೂಜೆ ನೆರವೇರಿಸಲಿದ್ದಾರೆ ಎಂದರು.
ಪಾರ್ಕಿಂಗ್ ವ್ಯವಸ್ಥೆ
ದ.ಕ.ಮತ್ತು ಕಾಸರಗೋಡು ಜಿಲ್ಲೆಗಳಿಂದ ಸುಮಾರು 15 ಸಾವಿರ ಮಂದಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ದೂರದಿಂದ ಬರುವ ವಾಹನಗಳಿಗೆ ಎಮ್ಮೆಕೆರೆ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಉಳಿದ ವಾಹನಗಳಿಗೆ ಸೈಂಟ್ ಆ್ಯನ್ಸ್ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 200 ಸ್ವಯಂ-ಸೇವಕರು ಸೇವೆಗೆ ಲಭ್ಯ ಇರುವರು ಎಂದರು.
ಈ ಸಂದರ್ಭ ಧರ್ಮಪ್ರಾಂತ್ಯದ ಪ್ರಧಾನ ಗುರು ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು, ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಕಾರ್ಯದರ್ಶಿ ಎಂ.ಪಿ. ನೊರೊನ್ಹಾ, ಫಾರ್‌ವಿಂಡ್ಸ್ ಜಾಹೀರಾತು ಸಂಸ್ಥೆಯ ಎಲಿಯಾಸ್ ಫೆರ್ನಾಂಡಿಸ್, ಮಂಗಳೂರು ಸೇವಾ ಸಮಿತಿಯ ಅಧ್ಯಕ್ಷ ಅರುಣ್ ಲೋಬೊ ಉಪಸ್ಥಿತರಿದ್ದರು. ಫಾ. ಮೆಲ್ವಿನ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.







