ಮೋದಿ ಸ್ವಕ್ಷೇತ್ರದಲ್ಲೇ ಎಬಿವಿಪಿಗೆ ಮುಖಭಂಗ!

ಲಕ್ನೋ, ನ.5: ಪ್ರಧಾನಿ ನರೇಂದ್ರ ಮೋದಿಯವರ ವಾರಾಣಾಸಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ (ಕೆವಿಎಂ) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಮುಖಭಂಗ ಅನುಭವಿಸಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉತ್ತರ ಪ್ರದೇಶದಲ್ಲಿ ಸತತ ನಾಲ್ಕನೇ ಸೋಲು ಕಂಡಿದೆ.
ಇದಕ್ಕೂ ಮುನ್ನ ಈ ಕೇಸರಿ ಪಡೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು), ದಿಲ್ಲಿ ವಿಶ್ವವಿದ್ಯಾನಿಲಯ (ಡಿಯು) ಹಾಗೂ ಅಲಹಾಬಾದ್ ವಿಶ್ವವಿದ್ಯಾನಿಲಯ (ಎಯು) ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ನೋಲುಂಡಿತ್ತು.
ಕೆವಿಪಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸಮಾಜವಾದಿ ಪಕ್ಷದ ಬಂಡಾಯ ಅಭ್ಯಥಿ ರಾಹುಲ್ ದುಬೆ ಪಾಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸಮಾಜವಾದಿ ಯುವಜನ ಛಾತ್ರ ಸಭಾ ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಜಂಟಿ ಅಭ್ಯರ್ಥಿಯಾಗಿದ್ದ ರೋಶನ್ ಕುಮಾರ್ ಅಯ್ಕೆಯಾದರು. ದುಬೆ ಎಬಿವಿಪಿಯ ವಾಲ್ಮೀಕಿ ಉಪಾಧ್ಯಾಯ ಅವರನ್ನು 2,365 ಮತಗಳ ಭಾರಿ ಅಂತರದಿಂದ ಸೋಲಿಸಿದರು.
ಸಮಾಜವಾದಿ ಪಕ್ಷದ ವಿದ್ಯಾರ್ಥಿ ಘಟಕದ ಮತ್ತೊಬ್ಬ ಬಂಡಾಯ ಅಭ್ಯರ್ಥಿ ಅನಿಲ್ ಯಾದವ್, ಸ್ವತಂತ್ರ ಅಭ್ಯರ್ಥಿಯಾಗಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದರು. ನಾಲ್ಕನೇ ಸ್ಥಾನ ಎಸ್‌ವೈಎಸ್ ಹಾಗೂ ಎನ್‌ಎಸ್‌ಯುಐ ಜಂಟಿ ಅಭ್ಯಥಿ ರವಿಪ್ರತಾಪ್ ಸಿಂಗ್ ಪಾಲಾಗಿದೆ. ಎಬಿವಿಪಿ ಅಭ್ಯರ್ಥಿಗಳು ಅಲ್ಪ ಅಂತರದಿಂದ ಸೋತಿದ್ದರೂ, ಒಂದು ಸ್ಥಾನವನ್ನೂ ಗೆಲ್ಲುವುದು ಸಾಧ್ಯವಾಗಿಲ್ಲ.







