ಕೀನ್ಯಾದಲ್ಲಿ ಭಾರತದ ಬಾಲಕನ ಕೊಲೆ; ವರದಿ ನೀಡುವಂತೆ ಭಾರತದ ರಾಯಭಾರಿಗೆ ಸಚಿವೆ ಸುಷ್ಮಾ ಸೂಚನೆ

ಹೊಸದಿಲ್ಲಿ, ನ.5: ಕೀನ್ಯಾದಲ್ಲಿ ಭಾರತದ ಬಾಲಕನನ್ನು ಹತ್ಯೆಗೈದ ಪ್ರಕರಣದ ಬಗ್ಗೆ ವರದಿ ನೀಡುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಕೀನ್ಯಾದಲ್ಲಿರುವ ಭಾರತದ ರಾಯಭಾರಿಗೆ ಆದೇಶ ನೀಡಿದ್ದಾರೆ.
ನೈರೋಬಿಯಲ್ಲಿ ನೆಲೆಸಿರುವ ಗುಜರಾತ್ ಕುಟುಂಬದ ಬಾಲಕ ಬಂಟಿ ಶಾ ಎಂಬಾತನನ್ನು ಮನೆಯಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಶನಿವಾರ ಮಧ್ಯಾಹ್ನ ಬಂಟಿ ಶಾ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಮೃತ ಬಾಲಕನ ಹೆತ್ತವರು ನೈರೊಬಿಯಾದಲ್ಲಿ ಹಾಸಿಗೆಗಳನ್ನು ತಯಾರಿಸುವ ಬಾಬ್ಮಿಲ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯನ್ನು ಹೊಂದಿದ್ದಾರೆ.
ಬಂಟಿ ಶಾ ಕೊಲೆ ಪ್ರಕರಣದ ಬಗ್ಗೆ ವರದಿ ನೀಡುವಂತೆ ಕೀನ್ಯಾದಲ್ಲಿರುವ ಭಾರತ ರಾಯಭಾರಿ ಸುಚಿತ್ರ ದುರೈ ಅವರಿಗೆ ಸಚಿವೆ ಸುಷ್ಮಾ ಸೂಚಿಸಿದ್ದಾರೆ. ದುರೈ ಅವರು ಶೀಘ್ರದಲ್ಲೇ ಈ ಸಂಬಂಧ ವರದಿ ನೀಡುವುದಾಗಿ ಸಚಿವೆ ಸುಷ್ಮಾ ಸ್ವರಾಜ್ ಗೆ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.
ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿದ್ದ ವೇಳೆ ಮೃತಪಟ್ಟ ಭಾರತದ ವ್ಯಕ್ತಿಯೊಬ್ಬರ ಮೃತದೇಹವನ್ನು ಸ್ವದೇಶಕ್ಕೆ ತರಲು ಸೂಕ್ತ ಅವರ ಕುಟುಂಬಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಸಚಿವೆ ಸುಷ್ಮಾ ಸ್ವರಾಜ್ ಅವರು ದಕ್ಷಿಣ ಆಫ್ರಿಕದಲ್ಲಿರುವ ಭಾರತದ ರಾಯಭಾರಿ ರುಚಿರಾ ಕಾಂಬೋಜ್ ಅವರಿಗೆ ಟ್ವೀಟ್ ಮಾಡಿದ್ದಾರೆ.







