ವಾದಿರಾಜ ರಸ್ತೆಯ ವಾಹನ ನಿಲುಗಡೆ ಸ್ಥಳದಲ್ಲಿ ಮೃತ್ಯು ಕೂಪ!

ಉಡುಪಿ, ನ.5: ಉಡುಪಿ ಶ್ರೀ ಕೃಷ್ಣ ಮಠ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ವಾದಿರಾಜ ರಸ್ತೆಯಲ್ಲಿ ಆಳದ ಚರಂಡಿಯೊಂದಿದೆ. ಅದರ ಮೇಲೆ ನಗರಾಡಳಿತವು ಸ್ಲ್ಯಾಬ್ ಹಾಕಿ ವಾಹನ ನಿಲುಗಡೆಗೆ ಸ್ಥಳ ವ್ಯವಸ್ಥೆಗೊಳಿಸಿದೆ. ಮಧ್ಯದಲ್ಲಿ ಚರಂಡಿಯೊಳಗೆ ಇಳಿದು ಶುಚಿಗೊಳಿಸಲು ದೊಡ್ಡರಂದ್ರ ಇಡಲಾಗಿದೆ. ಆದರೆ ಇದಕ್ಕೆ ಮುಚ್ಚುವ ವ್ಯವಸ್ಥೆ ಕಲ್ಪಿಸಿಲ್ಲ. ಬಾಯಿ ತೆರೆದುಕೊಂಡಿರುವ, ರಂಧ್ರ ಮೃತ್ಯುವಿಗೆ ಆಹ್ವಾನ ನೀಡುತ್ತಿದೆ.
ಇದು ಪ್ರಮುಖ ಸಂಪರ್ಕ ರಸ್ತೆಯಾಗಿರುವುರಿಂದ ದಟ್ಟ ವಾಹನ ಸಂಚಾರ ಇಲ್ಲಿರುತ್ತದೆ. ಪಾದಚಾರಿಗಳು ರಾತ್ರಿ ಹೊತ್ತು ಬಿದ್ದು ಈ ರಂಧ್ರದೊಳಗೆ ಬೀಳುವ ಭೀತಿಯೂ ಇದೆ. ಶಾಲಾ ಮಕ್ಕಳು ಇಲ್ಲಿಯೇ ನಡೆದು ಕೊಂಡು ಹೋಗುತ್ತಾರೆ.
ಅ.12ರಂದು ಆದಿ ಉಡುಪಿ ಮೀನು ಮಾರುಕಟ್ಟೆ ಬಳಿ, ಇದೆ ಮಾದರಿಯ ಮುಚ್ಟಳ ತೆರದಿಟ್ಟ ಹೊಂಡದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ನಗರಾಡಳಿತ ಕ್ರಮ ಕೈಗೊಳ್ಳಬೇಕು. ಬಾಯಿ ತೆರೆದಿರುವ ಮೃತ್ಯು ಕೂಪಕ್ಕೆ ಮುಚ್ಚಳ ಮುಚ್ಚಿಸುವ ವ್ಯವಸ್ಥೆ ಸಂಬಂಧಪಟ್ಟವರು ಮಾಡಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.







