ಚಿಕ್ಕಮಗಳೂರು : ಜಿಲ್ಲೆಯಾದ್ಯಂತ ನ.9ರಿಂದ 11ರವರೆಗೆ ನಿಷೇದಾಜ್ಞೆ
ಚಿಕ್ಕಮಗಳೂರು, ನ.5: ಜಿಲ್ಲೆಯಾದ್ಯಂತ ನ.9 ರ ಬೆಳಗ್ಗೆ 6 ಗಂಟೆಯಿಂದ ನ.11 ರ ಸಂಜೆ 6 ಗಂಟೆಯವರೆಗೆ ಜಿಲ್ಲಾಧಿಕಾರಿ ಎಂ.ಕೆ ಶ್ರೀರಂಗಯ್ಯ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.
ನ. 10 ರಂದು ಜಿಲ್ಲಾಡಳಿತದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಅಧೀಕ್ಷಕರ ವರದಿಯನ್ನಾಧರಿಸಿ ದಂಡ ಪ್ರಕ್ರಿಯೆ ಸಂಹಿತೆ 1973 ರ ಕಲಂ 144 ರ ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
ನಿಷೇದಾಜ್ಞೆ ಅವಧಿಯಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ, ಮುಷ್ಕರಗಳನ್ನು ನಡೆಸುವಂತಿಲ್ಲ. ಯಾವುದೇ ಮಾರಾಕಾಸ್ತ್ರಗಳನ್ನು ಹಿಡಿದು ಓಡಾಡುವಂತ್ತಿಲ್ಲ.ಯಾವುದೇ ರೀತಿಯ ಪ್ರಚಾರಗಳನ್ನು ಅಂದರೆ ಬಿತ್ತಿ ಪತ್ರ ಹಂಚುವ ಮೂಲಕ ವಾಹನದಲ್ಲಿ ಪ್ರಚಾರ ಮಾಡುವಂತಹ ಘೋಷಣೆ ಕೂಗುವಂತಹ, ಭಾಷಣ ಮಾಡುವಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಸರ್ಕಾರದಿಂದ ಆಯೋಜಿಸಿದ ಕಾರ್ಯಕ್ರಮಗಳು, ಮದುವೆ, ಮುಂಜಿ, ಶವ ಸಂಸ್ಕಾರ, ಸಂತೆ, ಜಾತ್ರೆ ಕಾರ್ಯಕ್ರಮಗಳಿಗೆ ನಿಷೇದಾಜ್ಞೆಯು ಅನ್ವಯಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







