ವೈದ್ಯ ವೃತ್ತಿ ವಿಶ್ವದಲ್ಲೇ ಗೌರವಯುತ ಹುದ್ದೆ: ಪ್ರೊ.ಕೆ.ಭೈರಪ್ಪ

ಉಳ್ಳಾಲ, ನ.5: ವಿಶ್ವಾದ್ಯಂತ ವೈದ್ಯಕೀಯ ವೃತ್ತಿ ಅತ್ಯಂತ ಗೌರವಯುತ ಹುದ್ದೆಯಾಗಿದೆ. ಭಾರತೀಯ ವೈದ್ಯರಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಿದೆ. ಹಳೆ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಆರ್ಥಿಕವಾಗಿ ಮಾತ್ರವಲ್ಲದೆ ಗೌರವಯುತ ಹುದ್ದೆ, ಮಹತ್ತರ ಸಾಧನೆಗೈದು ಕಲಿತ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಕರೆ ನೀಡಿದರು.
ಕೆ.ಎಸ್.ಹೆಗ್ಡೆ ವೈದ್ಯಕೀಯ ಅಲ್ಯುಮಿನಿ ಅಸೋಸಿಯೇಶನ್ ವತಿಯಿಂದ ದೇರಳಕಟ್ಟೆಯ ‘ಕ್ಷೇಮಾ’ ಆಡಿಟೋರಿಯಂನಲ್ಲಿ ಶನಿವಾರ ಜರಗಿದ ‘ಮೊದಲ ಅಲ್ಯುಮಿನಿ ಮೀಟ್’ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಟ್ಟೆ ವಿ.ವಿ ಯ ಕುಲಾಧಿಪತಿ ಎನ್.ವಿನಯ ಹೆಗ್ಡೆ ಮಾತನಾಡಿ, ವೈದ್ಯಕೀಯ ಮತ್ತು ಸಾಮಾಜಿಕ ಸೇವೆ ಅನ್ಯೋನ್ಯತೆಯನ್ನು ಹೊಂದಿದೆ. ಹಲವು ವೈದ್ಯರ ಶ್ರಮದ ಫಲವಾಗಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಅಭಿವೃದ್ಧಿಯಾಗಲು ಸಾಧ್ಯವಾಗಿದೆ. ಇದರ ಜತೆಗೆ ಸಂಸ್ಥೆಯೂ ವಿಸ್ತಾರವಾಗಿ ಬೆಳೆದಿದ್ದು, ವೈದ್ಯಕೀಯ ಕ್ಷೇತ್ರದಲ್ಲಿರುವ ಫಾರ್ಮಸಿ ಕಾಲೇಜು ದೇಶದಲ್ಲಿ 7ನೆ ಉತ್ತಮ ಕಾಲೇಜು ಸ್ಥಾನವನ್ನು ಪಡೆಯಲು ಸಾಧ್ಯವಾಗಿದೆ. ಇನ್ನಷ್ಟು ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿಗಳ ತ್ಯಾಗ ಅಪಾರ ಎಂದರು.
ನಿಟ್ಟೆ ವಿ.ವಿ. ಸಹಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ ಮಾತನಾಡಿ ಕ್ಷೇಮ ಕಾಲೇಜಿನ ಸಿಬ್ಬಂದಿ, ಸಿಬ್ಬಂದಿಯೇತರ ಹಾಗೂ ವಿದ್ಯಾರ್ಥಿಗಳ ಶ್ರಮದಿಂದಾಗಿ ಮೊದಲ ವರ್ಷದಲ್ಲೇ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ರ್ಯಾಂಕಿಂಗ್ ಗಳಿಸಲು ಸಾಧ್ಯವಾಗಿದೆ. ದೇಶದ 750 ವಿ.ವಿಗಳ ಪೈಕಿ ನಿಟ್ಟೆ ವಿ.ವಿ 83ನೆ ರ್ಯಾಂಕಿಂಗ್ ಪಡೆದ ಕೀರ್ತಿ ಇದೆ. ಇದು ವಿ.ವಿ ಕುಲಪತಿಗಳ ತ್ಯಾಗ ಮತ್ತು ಪರಿಶ್ರಮದ ಫಲದಿಂದ ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ 18 ವರ್ಷಗಳ ಸ್ಮರಣ ಸಂಚಿಕೆ ‘ ಸ್ಮರಣ್’ ಅನ್ನು ಕುಲಾಧಿಪತಿ ಬಿಡುಗಡೆಗೊಳಿಸಿದರು.
ಕ್ಷೇಮಾ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ಅಲ್ಯುಮಿನಿ ಅಸೋಸಿಯೇಶನ್ ಅಧ್ಯಕ್ಷ ಡಾ.ನಿರ್ಮಲ್ ಬಾಬು, ಸಂಘಟನಾ ಕಾರ್ಯದರ್ಶಿ ಡಾ.ನಿಖಿಲ್ ಎಂ.ಪಿ., ಉಪಾಧ್ಯಕ್ಷ ಡಾ.ನಿಖಿಲ್ ಎಸ್. ಶೆಟ್ಟಿ ಉಪಸ್ಥಿತರಿದ್ದರು.







