ತ್ರಿಪುರಾದಲ್ಲಿ ಹಿಂಸಾಕೃತ್ಯಗಳಿಗೆ ಬಿಜೆಪಿ,ಆರೆಸ್ಸೆಸ್‌ನಿಂದ ಹಣ: ಸಿಪಿಎಂ ಆರೋಪ

ಹೊಸದಿಲ್ಲಿ,ನ.5: ಚುನಾವಣೆ ಸನ್ನಿಹಿತವಾಗಿರುವ ತ್ರಿಪುರಾದಲ್ಲಿ ಹಿಂಸಾತ್ಮಕ ಚಟುವಟಿಕೆ ಗಳಿಗಾಗಿ ಬಿಜೆಪಿ ಮತ್ತು ಆರೆಸ್ಸೆಸ್ ಕೋಟ್ಯಂತರ ರೂಪಾಯಿಗಳನ್ನು ಸುರಿಯುತ್ತಿವೆ ಎಂದು ಸಿಪಿಎಂ ಆರೋಪಿಸಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ತ್ರಿಪುರಾದಲ್ಲಿ ಬುಡಕಟ್ಟು ಮತ್ತು ಬುಡಕಟ್ಟೇತರ ಗುಂಪುಗಳ ನಡುವೆ ಹಿಂಸಾತ್ಮಕ ಸಂಘರ್ಷಗಳು ನಡೆಯುತ್ತಿವೆ.
‘ರಾಜ್ಯ ಸರಕಾರದ ವಿರುದ್ಧ ಬಿಜೆಪಿಯ ಪಿತೂರಿಗೆ ಸಂಬಂಧಿಸಿದಂತೆ ನೈಜ ಚಿತ್ರಣವನ್ನು ಬಿಂಬಿಸಲು’ ಸಿಪಿಎಂ ‘ತ್ರಿಪುರಾ-ಪೀಪಲ್ ಫಸ್ಟ್ ಮಾಡೆಲ್’ ಎಂಬ ಕಿರುಪುಸ್ತಕವನ್ನು ಪ್ರಕಟಿಸಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ರಾಜ್ಯದಲ್ಲಿಯ ಬುಡಕಟ್ಟು ಮತ್ತು ಬುಡಕಟ್ಟೇತರರ ನಡುವೆ ಒಡಕನ್ನು ಮೂಡಿಸುವ ಪ್ರಚೋದಕ ನೀತಿಯನ್ನು ಅನುಸರಿಸುತ್ತಿವೆ ಮತ್ತು ಹಿಂಸಾತ್ಮಕ ಚಟುವಟಿಕೆಗಳಿಗಾಗಿ ಕೋಟ್ಯಂತರ ರೂ.ಗಳನ್ನು ಸುರಿಯುತ್ತಿವೆ ಎಂದು ಈ ಕಿರುಪುಸ್ತಕದಲ್ಲಿ ಆರೋಪಿಸಿರುವ ಬಿಜೆಪಿಯು ಹಲವಾರು ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಒಂದೂ ಸ್ಥಾನವನ್ನು ಗೆಲ್ಲದೆ ಮುಖ್ಯ ಪ್ರತಿಪಕ್ಷ ಸ್ಥಾನವನ್ನು ಕಿತ್ತುಕೊಂಡಿದೆ. ರಾಜಕೀಯ ಪಕ್ಷಗಳಿಗೆ ಬೆದರಿಕೆಯೊಡ್ಡಲು ಮತ್ತು ಬ್ಲಾಕ್‌ಮೇಲ್ ಮಾಡಲು ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನೂ ಅದು ಬಳಸಿಕೊಳ್ಳುತ್ತಿದೆ ಎಂದಿದೆ.
ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ವಿರುದ್ಧ ಇಂತಹ ಹಳೆಯ ತಂತ್ರಗಳು ನಡೆಯುವುದಿಲ್ಲ ಎಂದಿರುವ ಅದು, ಬಿಜೆಪಿಯ ಹಿಂಸಾತ್ಮಕ ತಂತ್ರಗಳ ಹೊರತಾಗಿಯೂ ತ್ರಿಪುರಾದ ಎಡರಂಗ ಸರಕಾರವು ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿದೆ.







