ಟಿಪ್ಪು ಜಯಂತಿ ದಿನಾಚರಣೆ: ಮೆರವಣಿಗೆಗೆ ಅನುಮತಿ ನಿಷೇಧ
ಶಾಂತಿ ಭಂಗ ಆಗದಂತೆ ಟಿಪ್ಪು ಜಯಂತಿ ಆಚರಣೆ: ಪಿಎಸೈ ಶಕ್ತಿವೇಲು
ಬಣಕಲ್, ನ.5: ಮುಂಬರುವ ಟಿಪ್ಪು ಜಯಂತಿ ಆಚರಣೆಯ ಸಂದರ್ಭದಲ್ಲಿ ಯಾವುದೇ ಸಮುದಾಯದವರಿಂದ ಕಾನೂನು ಭಂಗ ಆಗದಂತೆ ಜಾಗ್ರತೆ ವಹಿಸಿ ಕಾನೂನು ಪಾಲನೆ ಮಾಡಿ ಟಿಪ್ಪು ಜಯಂತಿ ಆಚರಿಸಬೇಕೆಂದು ಬಣಕಲ್ ಠಾಣಾಧಿಕಾರಿ ಶಕ್ತಿವೇಲು ಹೇಳಿದರು.
ಅವರು ಬಣಕಲ್ ಪೋಲಿಸ್ ಠಾಣೆಯಲ್ಲಿ ನಡೆದ ಟಿಪ್ಪು ಜಯಂತಿ ಕುರಿತು ಶಾಂತಿಸಭೆಯಲ್ಲಿ ಮಾತನಾಡಿದರು. ಯಾವುದೇ ಸಭೆ ಸಮಾರಂಭಗಳು ನಡೆಸಬೇಕಾದರೆ ಸಂಬಂಧಪಟ್ಟ ಗ್ರಾಂ.ಪಂ ಹಾಗೂ ಪೋಲಿಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರವಾನಗಿ ಪಡೆಯಬೇಕು.
ಜನಸಂದಣಿ ಇರುವ ಕಡೆ ಬ್ಯಾನರ್ ಮತ್ತು ಬಿತ್ತಿಪತ್ರಗಳನ್ನು ಹಾಕುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಶಾಂತಿ ಕದಡದಂತೆ ಎಚ್ಚರವಹಿಸಿ ಟಿಪ್ಪು ಜಯಂತಿ ಆಚರಿಸಬೇಕು. ಡಿಸಿ ಮತ್ತು ಎಸ್ಪಿ ಸಭೆಯಲ್ಲಿ ನಡೆದ ಆದೇಶದ ನಡಾವಳಿಯಂತೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಸೂಚಿಸಿದರು.
ಎಎಸೈ ಶಶಿ ಮಾತನಾಡಿ, ಆಚರಣೆಗಳು ಯಾವ ಧರ್ಮಗಳದ್ದೇ ಆದರೂ ಶಾಂತಿಯಿಂದ ನಡೆಸುವುದು ಸೂಕ್ತ. ಪ್ರಚೋಧನಾಕಾರಿ ಭಾಷಣಗಳನ್ನು ಹಮ್ಮಿಕೊಳ್ಳುವಂತಿಲ್ಲ. ಮೆರವಣಿಗೆಗಳನ್ನು ಈ ಸಂದರ್ಭದಲ್ಲಿ ನಿಷೇಧಿಸಲಾಗಿದೆ. ನ.13 ರಿಂದ ದತ್ತಮಾಲೆ, ನ.23 ರಿಂದ ದತ್ತ ಜಯಂತಿ ಬರುವುದರಿಂದ ಜನರು ಶಾಂತಿಯಿಂದ ವರ್ತಿಸಬೇಕು. ಯಾವುದೇ ಪರವಾನಿಗೆ ಪಡೆದ ಕಾರ್ಯಕ್ರಮಗಳು ನಡೆಸಿದರೆ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ನಿಯಮ ಪಾಲಿಸಿ ನಡೆಸಬೇಕಾಗುತ್ತದೆ ಎಂದರು.
ಕೋಮು ಸೌಹಾರ್ಧ ವೇದಿಕೆಯ ಗೌಸ್ ಮೊಹಿದ್ದೀನ್ ಮಾತನಾಡಿ, ಟಿಪ್ಪು ಜಯಂತಿಯದಂದು ಬಣಕಲ್ ಸುತ್ತಮುತ್ತ ನಮ್ಮ ಮುಸ್ಲಿಂ ಬಾಂಧವರಿಂದ ಯಾವುದೇ ಮೆರವಣಿಗೆಗಳು ನಡೆಯುವುದಿಲ್ಲ. ಶಾಂತಿ ಕಾಪಾಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದ್ದು ಅದನ್ನು ನಾವು ಪಾಲಿಸುತ್ತೇವೆ. ಬಣಕಲ್‍ಗೆ ನೂತನವಾಗಿ ಬಂದಿರುವ ಠಾಣಾಧಿಕಾರಿಯವರು ಉತ್ತಮ ಸೇವೆ ನೀಡುತ್ತಿದ್ದು ಕಾನೂನು ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಬಣಕಲ್‍ಗೆ ಒಬ್ಬ ನಿಷ್ಠೆಯ ಅಧಿಕಾರಿಯ ಅವಶ್ಯಕತೆಯಿತ್ತು. ಅದು ಈಗ ಈಡೇರಿದೆ. ಸಾರ್ವಜನಿಕರು ಉತ್ತಮ ರೀತಿಯಲ್ಲಿ ನಡೆದು ಕಾನೂನು ಪಾಲಿಸಲು ಕೈಜೋಡಿಸಬೇಕು ಎಂದು ತಿಳಿಸಿದರು.
ಶಾಂತಿಸಭೆಯಲ್ಲಿ ಮುಖ್ಯ ಪೇದೆ ರುದ್ರೇಶ್, ಯೋಗೀಶ್, ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್, ಗ್ರಾಮಸ್ಥರಾದ ಸುರೇಶ್‍ಶೆಟ್ಟಿ, ವಿನಯ್‍ಶೆಟ್ಟಿ, ಸಬ್ಲಿದೇವರಾಜ್, ಹಸನಬ್ಬ, ಅಭಿಷೇಕ್‍ಗೌಡ, ಸುಶಾಂತ್ ಮತ್ತಿತರರಿದ್ದರು.







