ಚುನಾವಣೆಯಲ್ಲಿ ಸ್ಪರ್ಧೆ ಶತಃಸಿದ್ದ: ಮುತಾಲಿಕ್

ಬೆಂಗಳೂರು, ನ. 5: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದು ಶತಃಸಿದ್ಧ. ಆದರೆ, ಯಾವ ಪಕ್ಷ ಎಂದು ಇದುವರೆಗೂ ಅಂತಿಮವಾಗಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ರವಿವಾರ ನಗರದ ಚಾಮರಾಜಪೇಟೆಯಲ್ಲಿರುವ ಜಂಗಮ ಕ್ಷೇತ್ರ ಪ್ರಾರ್ಥನಾ ಮಂದಿರದಲ್ಲಿ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಉದ್ಘಾಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಜನತೆ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳಿಂದ ಬೇಸತ್ತಿದ್ದಾರೆ.
ಅವರಲ್ಲಿ ಹೊಸ ವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಪಕ್ಷ ಸ್ಥಾಪನೆಯಾಗಿದೆ. ಹೊಸ ಪಕ್ಷದ ಪದಾಧಿಕಾರಿಗಳು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ ಎಂದು ಪ್ರಮೋದ್ ಮುತಾಲಿಕ್ ಇದೇ ವೇಳೆ ಸಲಹೆ ನೀಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮಚಂದ್ರ ಕುಲಕರ್ಣಿ ಮಾತನಾಡಿ, ಇದುವರೆಗೆ ದೇಶ ಮತ್ತು ರಾಜ್ಯಗಳನ್ನು ಆಳುತ್ತಾ ಬಂದಿರುವ ಹಲವಾರು ರಾಜಕೀಯ ಪಕ್ಷಗಳು ಜನರನ್ನು ಶೋಷಣೆಗೆ ಒಳಪಡಿಸಿವೆ. ಅವರ ಆಶೋತ್ತರಗಳಿಗೆ ಸ್ಪಂದಿಸದೇ, ಸ್ಪಂದಿಸುವ ರೀತಿಯಲ್ಲಿ ನಟನೆ ಮಾಡಿವೆ. ಈ ಹಿನ್ನೆಲೆಯಲ್ಲಿ ಇಂತಹ ಶೋಷಣೆಗೆ ಒಳಗಾದ ದೀನ ದಲಿತರ ಶ್ರೇಯೋಭಿವೃದ್ಧಿಗೆ ನಮ್ಮ ಪಕ್ಷ ಪಣ ತೊಟ್ಟಿದೆ ಎಂದರು.
ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್ ಮಾತನಾಡಿ, ಇದೊಂದು ರಾಷ್ಟ್ರೀಯ ಪಕ್ಷ. ಚುನಾವಣೆ ಆಯೋಗದಲ್ಲಿ ನೋಂದಣಿಯಾಗಿದೆ. ದೇಶದ ಅಭಿವೃದ್ಧಿ ಪರಿಕಲ್ಪನೆಯೊಂದಿಗೆ ಜನರ ಶ್ರೇಯೋಭಿವೃದ್ಧಿಯ ಧ್ಯೇಯದೊಂದಿಗೆ ಈ ಪಕ್ಷವನ್ನು ಆರಂಭಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕೊಳದ ಮಠದ ಶಾಂತವೀರ ಸ್ವಾಮಿ, ಭೀಮಪ್ಪ ಗಡದ್, ಸಿ.ವಿ.ಶಿವಶಂಕರ್, ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಪಾಲ್ಗೊಂಡಿದ್ದರು.
ಬೆಂಗಳೂರಿನ ಕೇಂದ್ರೀಯ ತೆರಿಗೆ ಮತ್ತು ಸೀಮಾ ಸುಂಕ ಇಲಾಖೆಯ ನೌಕರರ ಸಂಘ ಮಡಿವಾಳದ ಕುವೆಂಪುನಗರದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಬಿಬಿಎಂಪಿ ಸದಸ್ಯ ಕೆ.ದೇವದಾಸ್ ನೆರವೇರಿಸಿದರು. ಲೇಖಕ ಬೆಮಲ್ ಸೆಲ್ವ ಕುಮಾರ್, ರವೀಂದ್ರ ಹೊಸಕೇರಿ, ತೆರಿಗೆ ಇಲಾಖೆ ಸಹಾಯಕ ಅಯುಕ್ತ ಸಂತೋಷ್ ಹರವಟ್ಟಿ, ವಿಜಯ, ರವಿಶಂಕರ್, ಮ.ಚಂದ್ರಶೇಖರ್ ಹಾಜರಿದ್ದರು.







