ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹುಬ್ಬಳ್ಳಿಯಲ್ಲಿ ರಣಕಹಳೆ
ಸಂವಿಧಾನಿಕ ಮಾನ್ಯತೆಗಾಗಿ ಬೃಹತ್ ಸಮಾವೇಶ

ಕೃಪೆ ; ಟ್ವಿಟರ್
ಬೆಂಗಳೂರು/ಹುಬ್ಬಳ್ಳಿ, ಅ.5: ‘ಲಿಂಗಾಯತ ಧರ್ಮ ಸಂವಿಧಾನಿಕ ಮಾನ್ಯತೆಗಾಗಿ’ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಗಳಿಂದ ಎರಡು ಲಕ್ಷಕ್ಕೂ ಅಧಿಕ ಮಂದಿ ಪಾಲೊಳ್ಳುವ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ನೀಡಲೇಬೇಕೆಂಬ ಆಗ್ರಹವೂ ಮೊಳಗಿತು.
ರವಿವಾರ ಲಿಂಗಾಯತ ಧರ್ಮ ಸಂವಿಧಾನಿಕ ಮಾನ್ಯತೆಗಾಗಿ ಆಗ್ರಹಿಸಿ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಲಿಂಗಾಯತರ ಬೃಹತ್ ಸಮಾವೇಶಕ್ಕೆ ಜನ ಸಾಗರವೇ ಹರಿದು ಬಂದಿತ್ತು. ವೀರಶೈವ ಮಹಾಸಭಾ ‘ಲಿಂಗಾಯತ ಪ್ರತ್ಯೇಕ ಧರ್ಮ ಸಂವಿಧಾನಿಕ ಮಾನ್ಯತೆ’ಗೆ ಸ್ಪಂದಿಸದಿದ್ದರೆ ಪ್ರತ್ಯೇಕ ಲಿಂಗಾಯತ ಮಹಾ ಪರಿಷತ್ ರಚನೆ ಮಾಡಬೇಕಾಗುತ್ತದೆ ಎಂದು ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಶ್ಯಾಮನೂರು ಶಿವಶಂಕರಪ್ಪ ಸ್ಪಂದಿಸಿಲ್ಲ. ಅನಿವಾರ್ಯ ಪ್ರತ್ಯೇಕವಾಗಿ ಲಿಂಗಾಯತ ಮಹಾ ಪರಿಷತ್ ಆಗುವಂತೆ ಮಾಡಬೇಡಿ. ಪ್ರತ್ಯೇಕ ಪರಿಷತ್ ರಚನೆ ಆದ ಮೇಲೆ ದೂರಬೇಡಿ ಎಂದು ಕೋರಿದರು.
‘ವೀರಶೈವರು ಮತ್ತು ಲಿಂಗಾಯತರನ್ನು ಒಂದೇ ಎಂದು ಹೇಳುವ ಮೂಲಕ ನಮ್ಮನ್ನು ಕತ್ತಲೆಯಲ್ಲಿಟ್ಟಿದ್ದರು. ಎರಡೂ ಒಂದೇ ಎಂದು ಹೇಳುವ ಮೂಲಕ ಲಿಂಗಾಯತರನ್ನು ದುರುಪಯೋಗ ಮಾಡಿಕೊಳ್ಳಲಾಗಿತ್ತು. ಆದರೆ, ಈಗ ಲಿಂಗಾಯತರು ಜಾಗೃತರಾಗಿದ್ದೇವೆ. ನಮಗೆ ಮೋಸ ಮಾಡಿದವರ ಆಟ ಈಗ ನಡೆಯಲ್ಲ ಎಂದು ಹೊರಟ್ಟಿ ಗುಡುಗಿದರು.
ವೀರಶೈವರು ಲಿಂಗಾಯತ ಧರ್ಮದ ಒಂದು ಪಂಗಡ. ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು ಬಡ್ಡಿ ವ್ಯವಹಾರ ಮಾಡುವ ದಿಂಗಾಲೇಶ್ವರ ಸ್ವಾಮೀಜಿಗಳ ಟೀಕೆಗೆ ಜಗ್ಗಲ್ಲ ಎಂದ ಅವರು, ನಾವು ಹಣಕೊಟ್ಟು ಯಾರನ್ನು ಸಮಾವೇಶಕ್ಕೆ ಕರೆಸಿಲ್ಲ. ಬಹಳ ಜನ ನನಗೆ ಹೋರಾಟ ಕೈಬಿಡಲು ಒತ್ತಾಯ ಮಾಡಿದ್ದರು. ಆದರೆ, ನಾವು ಯಾವುದೇ ಒತ್ತಡಕ್ಕೂ ಜಗ್ಗಲ್ಲ ಎಂದರು.
ವಿವಾದಾತ್ಮಕ ಹೇಳಿಕೆ: ‘ಒಂದು ತಂದೆಗೆ(ಬಸವಣ್ಣ)ಹುಟ್ಟಿದವರು ಲಿಂಗಾಯತರು. ಐವರು(ಪಂಚಪೀಠ)ತಂದೆಯವರಿಗೆ ಹುಟ್ಟಿದವರು ವೀರಶೈವರು. ನೀವು ಒಂದು ತಂದೆಗೆ ಹುಟ್ಟಿದವರು ಎಂದು ಹೇಳಿಕೋಳ್ತೀರೋ ಅಥವಾ ಐದು ಜನ ತಂದೆಗೆ ಹುಟ್ಟಿದವರು ಅಂತ ಹೇಳಿಕೊಳ್ತೀರಾ’ ಎಂದು ಕೊಡಲ ಸಂಗಮದ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದರು.
ನಮ್ಮದು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ, ಹೀಗಾಗಿ ನಮ್ಮ ತಂದೆ ಒಬ್ಬನೆ. ವೀರಶೈವರದ್ದು ಪಂಚಪೀಠ ಎಂದ ಅವರು, ಸಮಾಜದಲ್ಲಿ ವಿಷ ಬಿತ್ತುವ ಕೆಲಸ ಪಂಚಾಚಾರ್ಯರೇ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸಮಾವೇಶದಲ್ಲಿ ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿ, ಗದುಗಿನ ತೋಂಟದಾರ್ಯ ಸ್ವಾಮಿ, ಚಿತ್ರದುರ್ಗದ ಮುರುಘ ಮಠದ ಶಿವಮೂರ್ತಿ ಮುರುಘ ಶರಣರು, ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ, ಮಾಜಿ ಸಚಿವ ಪಿ.ಸಿ.ಸಿದ್ದನಗೌಡರ, ಬಿ. ಆರ್.ಪಾಟೀಲ, ಸಂಸದ ಪ್ರಕಾಶ ಹುಕ್ಕೇರಿ, ನಿವೃತ್ತ ಐಎಎಸ್ ಅಧಿಕಾರಿ ಎಸ್. ಎಂ.ಜಾಮದಾರ, ವೀರಣ್ಣ ಮತ್ತಿಕಟ್ಟಿ ಸೇರಿ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.
ಹರಿದುಬಂದ ಜನಸಾಗರ: ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗಾಗಿ ಆಗ್ರಹಿಸಿ ನಡೆದ ಸಮಾವೇಶಕ್ಕೆ ಸುಮಾರು 2ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ‘ಜೈ ಬಸವೇಶ, ಗುರುಬಸವ ಲಿಂಗಾಯ ನಮಃ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.







