ವಿಪ್ರ ಕ್ರಿಕೆಟ್ ಪಂದ್ಯಾಟ: ಶಂಕನಾರಾಯಣ ತಂಡಕ್ಕೆ ಮಾಧ್ವ ಟ್ರೋಫಿ

ಉಡುಪಿ, ನ.5: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಚಿಟ್ಪಾಡಿ ಮಹಾತ್ಮಾ ಗಾಂಧಿ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ರಾಜ್ಯ ಮಟ್ಟದ ಆಯ್ದ ವಿಪ್ರ ತಂಡಗಳ ಕ್ರಿಕೆಟ್ ಪಂದ್ಯಾಟ ದಲ್ಲಿ ಶಂಕರನಾರಾಯಣ ತಂಡ ಮಾಧ್ವ ಟ್ರೋಫಿ ಹಾಗೂ 1,11,111ರೂ. ನಗದು ಬಹುಮಾನವನ್ನು ಗೆದ್ದುಕೊಂಡಿದೆ.
ರವಿವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ವಿಜೇತ ತಂಡಕ್ಕೆ ಟ್ರೋಫಿಯನ್ನು ವಿತರಿಸಿ ಆಶೀರ್ವಚನ ನೀಡಿ, ಹಿಂದಿನ ಕಾಲದಲ್ಲಿ ಕ್ಷತ್ರಿಯರಿಗೆ ಭುಜಬಲ ವಿದ್ದು ರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದರು. ಬ್ರಾಹ್ಮಣರು ತಮ್ಮ ಬುದ್ಧಿ ಬಲದಿಂದ ಕ್ಷತ್ರಿಯರಿಗೆ ನಿರ್ದೇಶನವನ್ನು ಕೊಡುತ್ತಿದ್ದರು. ಕಾಲ ಬದಲಾದಂತೆ ಬ್ರಾಹ್ಮಣರು ತಮ್ಮಲ್ಲಿರುವ ಬುದ್ಧಿ ಹಾಗೂ ಭುಜ ಬಲವನ್ನು ಉಪಯೋಗಿಸಿ ಕೊಂಡು ರಾಜ್ಯ ಹಾಗೂ ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್, ಉಡುಪಿ ಗಾಂಧಿ ಆಸ್ಪತ್ರೆಯ ಡಾ.ಹರಿಶ್ಚಂದ್ರ, ಉದ್ಯಮಿ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಆಚಾರ್ಯಾಸ್ ಏಸ್‌ನ ನಿರ್ದೇಶಕ ಲಾತವ್ಯ ಆಚಾರ್ಯ, ಕೊಡವೂರು ಶಂಕರನಾರಾಯಣ ದೇವಸ್ಥಾನದ ಮಾಜಿ ಅಧ್ಯಕ್ಷ ಟಿ.ರಾಘವೇಂದ್ರ ರಾವ್, ಉದ್ಯಮಿ ವಿಷ್ಣುಆಚಾರ್ಯ, ಬೆಂಗಳೂರಿನ ಶಾಂತ ಉಡುಪ ಉಪಸ್ಥಿತರಿ ದ್ದರು.
ಈ ಸದರ್ಭದಲ್ಲಿ ಪ್ರತಿಭಾನ್ವಿತ ಕ್ರಿಕೆಟ್‌ಪಟುಗಳಾದ ಅರ್ಜುನ್ ತಂತ್ರಿ ಉಡುಪಿ, ಸಂಧ್ಯಾ ಭಟ್ ಹಾಲಾಡಿ, ರಾಜೇಶ್ ಕೊಡಂಚ, ಶಿವನಾರಾಯಣ ಐತಾಳ್ ಅವರನ್ನು ಸನ್ಮಾನಿಸಲಾಯಿತು. ಪರಿಷತ್ತಿನ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರ್ ಸ್ವಾಗತಿಸಿದರು. ಖಜಾಂಚಿ ಕುಮಾರಸ್ವಾಮಿ ಉಡುಪ ವಂದಿಸಿ ದರು. ಸಿಂಧೂರ ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು.







