ಸಾಮಾನ್ಯ ಬಳಕೆಯ ಸರಕುಗಳ ಮೇಲಿನ ಜಿಎಸ್‌ಟಿ ಕಡಿತಕ್ಕೆ ಪರಿಶೀಲನೆ

ಹೊಸದಿಲ್ಲಿ,ನ.5: ಸರಕುಗಳು ಮತ್ತು ಸೇವಾ ತೆರಿಗೆಗಳ (ಜಿಎಸ್‌ಟಿ) ಮಂಡಳಿಯು ಈ ವಾರ ನಡೆಯಲಿರುವ ತನ್ನ ಸಭೆಯಲ್ಲಿ ಕರಕುಶಲ ಪೀಠೋಪಕರಣಗಳು, ಪ್ಲಾಸ್ಟಿಕ್ ಉತ್ಪನ್ನಗಳು ಮತ್ತು ಶಾಂಪೂದಂತಹ ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಇಳಿಸುವುದನ್ನು ಮತ್ತು ರಿಟರ್ನ್ ಸಲ್ಲಿಕೆ ನಿಯಮಗಳನ್ನು ಸರಳೀಕರಿಸುವ ಬಗ್ಗೆ ಪರಿಶೀಲಿಸಬಹುದು.
ಸಾಮಾನ್ಯ ಬಳಕೆಯ ಕೆಲವು ವಸ್ತುಗಳ ಮೇಲಿನ ಶೇ.28ರ ಜಿಎಸ್‌ಟಿ ದರವನ್ನು ತಗ್ಗಿಸುವುದನ್ನು ಪರಿಶೀಲಿಸಲು ವಿತ್ತಸಚಿವ ಅರುಣ ಜೇಟ್ಲಿ ನೇತೃತ್ವದ ಮಂಡಳಿಯು ನ.10ರಂದು ಸಭೆ ಸೇರಲಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದರು.
ಹಿಂದಿನ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಅಬಕಾರಿ ಸುಂಕದಿಂದ ವಿನಾಯಿತಿ ಪಡೆದಿದ್ದ ಅಥವಾ ಕಡಿಮೆ ವ್ಯಾಟ್ ದರಗಳನ್ನು ವಿಧಿಸಲಾಗುತ್ತಿದ್ದ ಸರಕುಗಳಿಗೆ ತೆರಿಗೆಗಳು ಏರಿಕೆಯಾಗಿರುವ ಕ್ಷೇತ್ರಗಳಲ್ಲಿ ತೆರಿಗೆ ದರಗಳನ್ನು ಮಂಡಳಿಯು ಪರಿಷ್ಕರಿಸುವ ಸಾಧ್ಯತೆಯಿದ್ದು, ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಇನ್ನಷ್ಟು ನೆಮ್ಮದಿಯನ್ನು ಕಲ್ಪಿಸಲಿದೆ.
ಶೇ.28 ತೆರಿಗೆ ವರ್ಗದಲ್ಲಿಯ ವಸ್ತುಗಳ ಮೇಲಿನ ಜಿಎಸ್‌ಟಿ ಪರಿಷ್ಕರಣೆಯನ್ನು ನಿರೀಕ್ಷಿ ಸಲಾಗಿದೆ. ಹೆಚ್ಚಿನ ದಿನಬಳಕೆಯ ವಸ್ತುಗಳು ಶೇ.18ರ ತೆರಿಗೆ ದರಕ್ಕೆ ಇಳಿಯಬಹುದು. ಪೀಠೋಪಕರಣಗಳು, ಇಲೆಕ್ಟ್ರಿಕ್ ಸ್ವಿಚ್‌ಗಳು, ಪ್ಲಾಸ್ಟಿಕ್ ಪೈಪ್‌ಗಳಂತಹ ವಸ್ತುಗಳ ಮೇಲಿನ ತೆರಿಗೆ ದರವನ್ನೂ ಸಭೆಯು ಪುನರ್‌ಪರಿಶೀಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು.
ಜಿಎಸ್‌ಟಿಯಡಿ ಎಲ್ಲ ವಿಧಗಳ ಪೀಠೋಪಕರಣಗಳಿಗೆ ಶೇ.28 ತೆರಿಗೆಯನ್ನು ವಿಧಿಸಲಾಗಿದೆ. ಮರದ ಪೀಠೋಪಕರಣಗಳನ್ನು ಅಸಂಘಟಿತ ಕ್ಷೇತ್ರದಲ್ಲಿಯ ಕುಶಲಕರ್ಮಿಗಳು ತಯಾರಿಸುತ್ತಿದ್ದು, ಇವುಗಳನ್ನು ಹೆಚ್ಚಾಗಿ ಮಧ್ಯಮ ವರ್ಗದ ಕುಟುಂಬಗಳು ಬಳಸುತ್ತವೆ. ಇವುಗಳ ಮೇಲಿನ ತೆರಿಗೆಯನ್ನು ತಗ್ಗಿಸುವಂತೆ ಒತ್ತಾಯಗಳು ಕೇಳಿ ಬಂದಿದ್ದವು.
ತೂಕದ ಯಂತ್ರಗಳ ಜೊತೆಗೆ ಕಂಪ್ರೆಸರ್‌ಗಳ ಮೇಲಿನ ತೆರಿಗೆ ದರವು ಶೇ.28ರಿಂದ ಶೇ.18ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ.
ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಜಿಎಸ್‌ಟಿ ಮಂಡಳಿಯು ಈಗಾಗಲೇ 100ಕ್ಕೂ ಅಧಿಕ ಸರಕುಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸಿದೆ.







