ಜನವರಿ 31ರ ಒಳಗೆ ರೈಲ್ವೆ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ

ಹೊಸದಿಲ್ಲಿ, ನ. 5: ತನ್ನ ಎಲ್ಲ ವಲಯ ಹಾಗೂ ವಿಭಾಗಗಳಲ್ಲಿ 2018 ಜನವರಿ 31ರಿಂದ ಆಧಾರ್ ಆಧರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಅಳವಡಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.
ಅಧಿಕಾರಿಗಳು ಕೆಲಸಕ್ಕೆ ತಡವಾಗಿ ಬರುವುದು ಹಾಗೂ ಕೆಲಸಕ್ಕೆ ಹಾಜರಾಗದೇ ಇರುವುದನ್ನು ಪರಿಶೀಲಿಸಲು ರೈಲ್ವೆ ಮಂಡಳಿ ಈ ವ್ಯವಸ್ಥೆ ಅಳವಡಿಸಲು ನಿರ್ಧರಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
2018 ಜನವರಿ 31ರಿಂದ ಎಲ್ಲ ರೈಲ್ವೆ ವಲಯ ವಿಭಾಗಗಳಲ್ಲಿ ಆಧಾರ್ ಆಧರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಅಳವಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ವ್ಯವಸ್ಥೆ ಅಳವಡಿಸುವುದಕ್ಕೆ ಸಂಬಂಧಿಸಿ ಎಲ್ಲ ವಲಯಗಳು ಕಳೆದ ವಾರ ಆದೇಶ ಪತ್ರ ಸ್ವೀಕರಿಸಿವೆ ಎಂದು ಅವರು ತಿಳಿಸಿದ್ದಾರೆ.
ಈ ಆದೇಶದಂತೆ ಮೊದಲ ಹಂತದಲ್ಲಿ ಎಲ್ಲ ವಿಭಾಗ, ವಲಯ, ಆರ್‌ಡಿಎಸ್‌ಒ, ಮೆಟ್ರೊ ರೈಲು ಕೋಲ್ಕತಾ, ರೈಲ್ವೆ ಕಾರ್ಯಾಗಾರ, ಕಾರ್ಖಾನೆ ಹಾಗೂ ಉತ್ಪಾದನಾ ಘಟಕ ಗಳಲ್ಲಿ ನವೆಂಬರ್ 30ರ ಒಳಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಅಳವಡಿಸಲಾಗುವುದು.
ಎರಡನೆ ಹಂತವಾಗಿ ಸರಕಾರದ ಅಡಿಯಲ್ಲಿರುವ, ಜೋಡಿಸಲಾದ, ಅಧೀನದಲ್ಲಿರುವ ಕಚೇರಿಗಳು ಸೇರಿದಂತೆ ರೈಲ್ವೆಯ ಎಲ್ಲ ಕಚೇರಿಗಳಲ್ಲಿ 2018 ಜನವರಿ 31ರ ಒಳಗೆ ಅಳವಡಿಸಲಾಗುವುದು.
ಪ್ರಸ್ತುತ ಈ ವ್ಯವಸ್ಥೆ ರೈಲ್ವೆ ಮಂಡಳಿ ಹಾಗೂ ಕೆಲವು ವಲಯದ ಕೇಂದ್ರ ಕಚೇರಿಯಲ್ಲಿ ಮಾತ್ರ ಇದೆ.







