ಮಡಿಕೇರಿಯಲ್ಲಿ ‘ನೇತ್ರದಾನ ನೋಂದಾವಣೆ ಅಭಿಯಾನ’
ನೇತ್ರದಾನದ ಮಹತ್ವವನ್ನು ಅರಿಯಲು ಶಾಸಕ ಕೆ.ಜಿ.ಬೋಪಯ್ಯ ಕರೆ

ಮಡಿಕೇರಿ,ನ.5 :ದೃಷ್ಟಿಹೀನರ ನೋವನ್ನು ಅರಿತು, ಅವರ ಬಾಳಿನಲ್ಲಿ ಬೆಳಕು ಮೂಡಿಸಬಲ್ಲ ನೇತ್ರದಾನದ ಮಹತ್ವದ ಬಗ್ಗೆ ಸಮಾಜದ ಪ್ರತಿಯೊಬ್ಬರು ಅರಿವನ್ನು ಮೂಡಿಸಿಕೊಳ್ಳುವಂತಾಗಬೇಕೆಂದು ಶಾಸಕ ಕೆ.ಜಿ.ಬೋಪಯ್ಯ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕೊಡಗು ಜಿಲ್ಲಾ ಧರ್ಮಸ್ಥಳ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಪ್ರಜಾಸತ್ಯ ಪತ್ರಿಕೆಯ ವತಿಯಿಂದ ಆಯೋಜಿತ ನೇತ್ರದಾನ ನೋಂದಾವಣೆ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ನೇತ್ರದಾನದಂತಹ ಮಹಾನ್ ಕಾರ್ಯಕ್ಕೆ ಮಹಿಳೆಯರು ಮುಂದೆ ಬಂದಿರುವುದು ಶ್ಲಾಘನೀಯ. ಪ್ರಸ್ತುತ ಪ್ರತಿಯೊಬ್ಬರು ನಮ್ಮಿಂದ ಸಮಾಜಕ್ಕೇನು ನೀಡಬಹುದೆನ್ನುವ ಬಗ್ಗೆ ಜಾಗೃತರಾಗುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಶ್ವಿನಿ ಆಸ್ಪತ್ರೆಯ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತರಾದ ಜಿ.ರಾಜೇಂದ್ರ ಮಾತನಾಡಿ,
ನೇತ್ರದಾನದಿಂದ ಲೋಕವನ್ನೇ ನೋಡದವರಿಗೆ ಲೋಕವನ್ನು ನೋಡುವ ಅವಕಾಶ ಒದಗಿಬರುತ್ತದೆ. ವ್ಯಕ್ತಿ ಸಾವನ್ನಪ್ಪಿದ ಬಳಿಕ ದೇಹವನ್ನು ಹೂಳುತ್ತಾರೆ, ಸುಟ್ಟು ನಾಶಪಡಿಸುತ್ತಾರೆ. ಆ ರೀತಿ ನಾಶಪಡಿಸುವುದಕ್ಕಿಂತ ಇತರರಿಗೆ ನೆರವಾಗುವುದು ಉತ್ತಮ. ನಾನೂ ಕೂಡ ನನ್ನ ನೇತ್ರವನ್ನು ದಾನ ಮಾಡುತ್ತೇನೆ ಎಂದು ಈ ಸಂದರ್ಭ ತಮ್ಮ ನೇತ್ರಗಳನ್ನು ದಾನ ಮಾಡುವುದಾಗಿ ಹೆಸರನ್ನು ನೋಂದಾಯಿಸಿಕೊಂಡರು.
ಮಾಜಿ ಸಚಿವ ಮತ್ತು ಜೆಡಿಎಸ್ ಮುಖಂಡ ಜೀವಿಜಯ ಮಾತನಾಡಿ, ಮನುಷ್ಯರು ಯಾರೂ ಶಾಶ್ವತರಲ್ಲ, ಒಂದಲ್ಲ ಒಂದು ದಿನ ಮರಣವನ್ನಪ್ಪಬೇಕಾಗುತ್ತದೆ. ಹಾಗಾಗಿ ದೇಹ ನಶಿಸಿದರೂ ನೇತ್ರ ಇನ್ನೊಬ್ಬರಿಗೆ ದಾನ ಮಾಡಿದರೆ ನಮ್ಮ ನೇತ್ರ ಮುಂದೆಯೂ ಬದುಕುತ್ತದೆ. ಕೋಟ್ಯಾನುಕೋಟಿ ಜನರು ಇಂದು ಅಂಧತ್ವದಿಂದ ಬಳಲುತ್ತಿದ್ದು ಅವರೆಲ್ಲರಿಗೂ ನೇತ್ರದಾನದಿಂದ ಉಪಕಾರವಾಗುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಭಾಷಣಕಾರರಾದ ಸಕ್ಷಮ ಸಂಘಟನಾ ಕಾರ್ಯದರ್ಶಿ ಕರ್ನಾಟಕ ದಕ್ಷಿಣ ಪ್ರಾಂತ್ಯದ ಜಯರಾಮ್ ಬೊಳ್ಳಾಜೆ ಮಾತನಾಡಿ, ಜೀವನ ಪೂರ್ತಿ ಅಂಧಕಾರದಿಂದ ಪರಿತಪಿಸುವವರ ಬಗ್ಗೆ ನಮ್ಮಲ್ಲಿ ಸಂವೇದನೆ ಹೆಚ್ಚಾಗಬೇಕು. ಸಾವನ್ನಪ್ಪುವವರೆಲ್ಲರೂ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದೇ ಆದಲ್ಲಿ ಅಂಧರ ಬಾಳಲ್ಲಿ ಬೆಳಕು ಮೂಡಿಸಿದಂತಾಗುತ್ತದೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕರಾದ ಡಾ.ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಮಹಿಳೆಯರಿಗೆ ಉಳಿತಾಯ, ಒಗ್ಗಟ್ಟನ್ನು ಪರಿಚಯಿಸಿ ಅದನ್ನು ಕಾರ್ಯರೂಪಕ್ಕೆ ತಂದಿರುವುದರಿಂದಲೇ ರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮನ್ನಣೆ ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿ, ಮಹಿಳಾ ಸಬಲೀಕರಣದಿಂದ ಗ್ರಾಮೀಣ ಭಾಗದ ಮೂಲಭೂತ ಸಮಸ್ಯೆ ನಿವಾರಣೆಯಾಗಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರಾಜಪೇಟೆ ಮಡಿಕೇರಿ ಯೋಜನಾಧಿಕಾರಿ ಸದಾಶಿವಗೌಡ ಮಾತನಾಡಿದರು.ರಾಜೇಶ್ವರಿ ನಗರದ ಸೇವಾ ಪ್ರತಿನಿಧಿ ಆಶಾ ವರ್ಗೀಸ್ ಸ್ವಾಗತಿಸಿ, ಸುಬ್ರಮಣ್ಯನಗರದ ಸೇವಾಪ್ರತಿನಿಧಿ ಜಯಂತಿ ವಂದಿಸಿದರು.







