ಸಿದ್ದರಾಮಯ್ಯ ಅವರ ಕಣ್ಣು ಪ್ರಧಾನಿ ಗದ್ದುಗೆಯತ್ತ ಹರಿದಿದೆ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ನ.5: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನನ್ನು ಕಂಡರೆ ಭಯ ಎಂದಿರುವುದು ರಾಷ್ಟ್ರರಾಜಕಾರಣದತ್ತ ಹೋಗಿ ದೇಶದ ಪ್ರಧಾನಿಯಾಗಬೇಕು ಎಂಬ ಆಸೆ ಅವರಲ್ಲಿದೆ ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಶಾಸಕ ಜಿ.ಟಿ,ದೇವೇಗೌಡ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಪ್ರಧಾನ ಮಂತ್ರಿ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಹಣಕಾಸು ಸಚಿವ, ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಹುದ್ದೆಗಳನ್ನು ಅನುಭವಿಸಿರುವ ಸಿದ್ದರಾಮಯ್ಯ ಅವರ ಕಣ್ಣು ಈಗ ಪ್ರಧಾನಿ ಗದ್ದುಗೆಯತ್ತ ಹರಿದಿದೆ ಎಂದರು.
ಸಿದ್ದರಾಮಯ್ಯ ಅವರು ವಿರೋಧ ಪಕ್ಷಗಳಿಗೆ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನನ್ನು ಕಂಡರೆ ಭಯ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಆ ಮಾತುಗಳಲ್ಲಿ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳುವ ಇಂಗಿತ ಅಡಗಿದೆ ಎಂದರು.
ಇದೇನು ವ್ಯಂಗ್ಯವೇ ಅಥವಾ ಶಾಕ್ ನೀಡುತ್ತಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಅಲ್ಲ, ಇದು ವಾಸ್ತವ. ಸಿದ್ದರಾಮಯ್ಯ ಜನತಾ ಪಕ್ಷ, ಜಾ.ದಳದಲ್ಲಿದ್ದಾಗಿನಿಂದಲೂ ಈಗೇನು ಅವರು ಅನುಭವಿಸಿದ್ದಾರೋ ಆ ಎಲ್ಲ ಹುದ್ದೆಗಳ ಕನಸು ಕಂಡಿದ್ದರು. ಅದಕ್ಕೆ ನಾನು ಕೂಡ ಬೆಂಬಲ ನೀಡಿದ್ದೆ ಎಂದು ಸ್ಪಷ್ಟಪಡಿಸಿದರು.
ಡಿ.ದೇವರಾಜ ಅರಸು ಅವರ ನಂತರ ಸಿದ್ದರಾಮಯ್ಯ ಅವರನ್ನು ಜನರು ಒಪ್ಪಿಕೊಂಡಿದ್ದರು. ನಾವು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದೆವು. ಹಿಂದೆ ಅರಸು ಅವರ ರಾಜಕೀಯ ಬೆಳವಣಿಗೆಯನ್ನು ಗಮನಿಸಿದ ಇಂದಿರಾ ಗಾಂಧಿ ಅವರು, ಈತ ನನಗೇ ಎದುರಾಳಿ ಆಗಬಹುದು ಎಂದು ಭಾವಿಸಿದ್ದರು. ಹಾಗಾಗಿ ಅರಸು ಅವರನ್ನು ರಾಜಕೀಯವಾಗಿ ದಮನ ಮಾಡಿದರು. ಆದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಸಿದ್ದರಾಮಯ್ಯ ಅವರನ್ನು ತಡೆಯುವ ಶಕ್ತಿ ಇಲ್ಲ ಎಂದು ನುಡಿದರು.
ಕೇಂದ್ರದಲ್ಲಿರುವ ಕಾಂಗ್ರೆಸ್ಸಿಗರಿಗೆ ಸಿದ್ದರಾಮಯ್ಯ ಅನಿವಾರ್ಯ ಆಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ, ಮೋದಿ ಅವರಿಗೆ ನನ್ನನ್ನು ಕಂಡರೆ ಭಯ ಎಂದು ಹೇಳಿದ್ದಾರೆ. ಆ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರೊಂದಿಗೆ ನೇರ ಹಣಾಹಣಿ ನಡೆಸಲಿದ್ದಾರೆ. 2018ರ ವಿಧಾನಸಭಾ ಚುನಾವಣೆ ನಂತರ ಅದು ಬಹಿರಂಗಗೊಳ್ಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಮಾಜಿ.ಜಿ.ಪಂ.ಅಧ್ಯಕ್ಷ ಕಡಕೊಳ ನಾಗರಾಜು, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಗಂಗಾಧರ್, ಇಲವಾಲ ಗ್ರಾ.ಪಂ.ಅಧ್ಯಕ್ಷ ನಾಗರಾಜು, ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







