ಗುಜರಾತ್ ಚುನಾವಣೆ: ಮೆವಾನಿಗೆ ಪೊಲೀಸ್ ರಕ್ಷಣೆ
ತನ್ನ ಮೇಲೆ ನಿಗಾ ಇರಿಸುವ ಸಂಚು ಎಂದ ದಲಿತ ನಾಯಕ

ಅಹ್ಮದಾಬಾದ್,ನ.5: ದಲಿತ ನಾಯಕ ಜಿಗ್ನೇಶ ಮೆವಾನಿ ಅವರಿಗೆ ಸರಕಾರವು ರವಿವಾರ ಇಬ್ಬರು ಸಶಸ್ತ್ರ ಪೊಲೀಸರ ರಕ್ಷಣೆಯನ್ನು ಒದಗಿಸಿದೆ. ಇದು ತನ್ನ ಚಟುವ ಟಿಕೆಗಳ ಮೇಲೆ ನಿಗಾ ಇರಿಸುವ ಸರಕಾರದ ಸಂಚು ಎಂದು ಮೆವಾನಿ ಬಣ್ಣಿಸಿದ್ದಾರೆ. ಆದರೆ ರಾಜ್ಯದಲ್ಲಿಯ ಪ್ರಸ್ತುತ ರಾಜಕೀಯ ಸ್ಥಿತಿ ಮತ್ತು ಮೆವಾನಿ ಅವರಿಗೆ ಇರುವ ಬೆದರಿಕೆಯ ಮಟ್ಟವನ್ನು ಪರಿಗಣಿಸಿ ರಕ್ಷಣೆಯನ್ನು ಒದಗಿಸಲಾಗಿದೆ ಎಂದು ಗುಜರಾತ ಪೊಲೀಸರು ಹೇಳಿದ್ದಾರೆ.
ಇಲ್ಲಿಯ ಎಲ್ಲಿಸ್ ಬ್ರಿಡ್ಜ್ ಪ್ರದೇಶದಲ್ಲಿ ಯುವಜನರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,ನಾನು ಕೇಳಿರದಿದ್ದರೂ ನನಗೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ. ನನ್ನ ಮೇಲೆ ನಿಗಾ ಇರಿಸಲು ಈ ವ್ಯವಸ್ಥೆಯೇ ಎಂದು ನಾನು ಕೇಳಿದಾಗ ಹೌದು ಎಂದು ಪೊಲೀಸರು ತಿಳಿಸಿದ್ದಾರೆ. ಇದು ರಾಜ್ಯದಲ್ಲಿಯ ಹಾಲಿ ಪರಿಸ್ಥಿತಿಯ ಬಗ್ಗೆ ಬಹಳಷ್ಟನ್ನು ಹೇಳುತ್ತದೆ ಎಂದರು.
ಹಾರ್ದಿಕ್ ಪಟೇಲರಂತಹ ಇತರ ಯುವ ನಾಯಕರಿಗೂ ಸರಕಾರವು ಇಂತಹುದೇ ರಕ್ಷಣೆಯನ್ನು ಒದಗಿಸಬಹುದು ಎಂದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೆವಾನಿ ಹೇಳಿದರು.





