ದೇಶಿ ನಿರ್ಮಿತ ಸಬ್‌ಸೋನಿಕ್ ಕ್ಷಿಪಣಿ ‘ನಿರ್ಭಯ್’5ನೇ ಬಾರಿ ಪರೀಕ್ಷೆಗೆ ಸಿದ್ಧ

ಹೊಸದಿಲ್ಲಿ,ನ.5: ಕಳೆದ ವರ್ಷದ ಡಿಸೆಂಬರ್‌ನಲ್ಲಿ ತನ್ನ ಹಿಂದಿನ ಪರೀಕ್ಷೆಯಲ್ಲಿ ವಿಫಲಗೊಂಡಿದ್ದ ಭಾರತದ ದೇಶಿ ನಿರ್ಮಿತ ಸಬ್‌ಸೋನಿಕ್ ದಾಳಿ ಕ್ಷಿಪಣಿ ‘ನಿರ್ಭಯ್’ ಮುಂದಿನ ವಾರ ಐದನೇ ಪರೀಕ್ಷೆಗೊಳಗಾಗಲಿದೆ.
750-1000 ಕಿ.ಮೀ.ವ್ಯಾಪ್ತಿಯ ನಿರ್ಭಯ್ 2013, ಮಾ.12ರಂದು ಮೊದಲ ಬಾರಿಗೆ ಪರೀಕ್ಷೆಗೊಳಗಾಗಿತ್ತು. ಆದರೆ 20 ನಿಮಿಷಗಳ ಹಾರಾಟದ ಬಳಿಕ ಪತನಗೊಂಡು ಪರೀಕ್ಷೆಯು ವಿಫಲಗೊಂಡಿತ್ತು. ಆದರೆ 2014,ಅ.17ರಂದು ನಡೆದಿದ್ದ ಎರಡನೇ ಪರೀಕ್ಷೆಯು ಯಶಸ್ವಿಯಾಗಿತ್ತು. ನಂತರ 2015,ಅಕ್ಟೋಬರ್ ಮತ್ತು 2016, ಡಿಸೆಂಬರ್ ನಲ್ಲಿ ನಡೆದಿದ್ದ ಇನ್ನೆರಡು ಪರೀಕ್ಷೆಗಳು ವಿಫಲಗೊಂಡಿದ್ದವು.
ರವಿವಾರ ಇಲ್ಲಿ ಫಿಪ್ಸ್‌ಫಿಜಿಯೊಕಾನ್-2017 ಅಂತರರಾಷ್ಟ್ರೀಯ ಸಮ್ಮೇಳನದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಆರ್‌ಡಿಒ ಮುಖ್ಯಸ್ಥ ಎಸ್. ಕ್ರಿಸ್ಟೋಫರ್ ಅವರು, ನಾಲ್ಕನೇ ಪರೀಕ್ಷೆಯ ವೇಳೆ ವೈಫಲ್ಯಕ್ಕೆ ಕಾರಣವಾಗಿದ್ದ ತಾಂತ್ರಿಕ ದೋಷಗಳನ್ನು ಈಗ ನಿವಾರಿಸಲಾಗಿದೆ. ಮುಂದಿನ ವಾರ ಐದನೇ ಬಾರಿ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದರು.
290 ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ, ಆರು ಮೀ.ಉದ್ದ ಮತ್ತು 0.52 ಮೀ. ವ್ಯಾಸ ಹೊಂದಿರುವ 1,500 ಕೆಜಿ ತೂಕದ ನಿರ್ಭಯ್ ಕ್ಷಿಪಣಿಯು ಭಾರತ-ರಷ್ಯಾ ಜಂಟಿ ತಯಾರಿಕೆಯ ಬ್ರಹ್ಮೋಸ್ ಕ್ಷಿಪಣಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆಯಿದೆ.







