ರಸ್ತೆ ಅಪಘಾತ : ಓರ್ವ ಮೃತ್ಯು

ಮದ್ದೂರು, ನ.5: ತಾಲೂಕಿನ ಮಳವಳ್ಳಿಯ ರಸ್ತೆಯ ಉಪ್ಪಿನಕೆರೆ ಗೇಟ್ ಬಳಿ ರವಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಚನ್ನಪಟ್ಟಣ ತಾಲೂಕಿನ ಪಾಳ್ಯದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ರವಿ(35) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಅವರ ತಂದೆ ಪುಟ್ಟಸ್ವಾಮಿ(60) ಅವರಿಗೆ ಕಾಲು ಮರಿದಿದ್ದು, ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಗುರುದೇವರಹಳ್ಳಿಯಲ್ಲಿ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿಕೊಂಡು ರವಿ ತನ್ನ ತಂದೆಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಗ್ರಾಮದ ಕಡೆ ಬರುತ್ತಿದ್ದಾಗ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಓಮ್ನಿ ಕಾರು ಢಿಕ್ಕಿಯಾಗಿ ರವಿ ಸ್ಥಳದಲ್ಲೇ ಸಾವನ್ನಪ್ಪಿದರು.
ರವಿ ಮಂಗಳೂರಿನ ಕಾಲೇಜೊಂದರ ಉಪನ್ಯಾಸಕರಾಗಿದ್ದು, ಪಿಎಚ್‍ಡಿ ಪದವಿಗಾಗಿ ಸಂಶೋಧನೆ ಕೈಗೊಂಡಿದ್ದರು. ಪತ್ನಿ ಶಿವಲೀಲ ಮತ್ತು ಎರಡು ವರ್ಷದ ಮಗು ಇದೆ. ತಾಲೂಕು ಆಸ್ಪತ್ರೆ ಎದುರು ರವಿ ಸಂಬಂಧಿಕರ ರೋದನ ಮುಗಿಲುಮುಟ್ಟಿತ್ತು.
ಮದ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





