ಐಸಿಸ್ ಕಾರ್ ಬಾಂಬ್ ದಾಳಿ: 12ಕ್ಕೂ ಹೆಚ್ಚು ನಿರಾಶ್ರಿತರ ಸಾವು

ಬೇರುತ್, ನ.5: ಸಿರಿಯಾದ ಪೂರ್ವ ಪ್ರಾಂತದ ಡಯರ್ ಎಝಾರ್‌ನಲ್ಲಿ ಐಸಿಸ್ ಉಗ್ರರು ನಡೆಸಿರುವ ಕಾರ್ ಬಾಂಬ್ ದಾಳಿಯಲ್ಲಿ 12ಕ್ಕೂ ಹೆಚ್ಚು ನಿರಾಶ್ರಿತರು ಬಲಿಯಾಗಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಬ್ರಿಟನ್ ಮೂಲದ ಮಾನವಹಕ್ಕುಗಳ ಸಂಘಟನೆಯ ಸಿರಿಯ ವೀಕ್ಷಕರು ತಿಳಿಸಿದ್ದಾರೆ.
ಸಿರಿಯದಲ್ಲಿ ಐಸಿಸ್ ಅಸ್ತಿತ್ವವಿರುವ ಕಟ್ಟಕಡೆಯ ನಗರವಾದ ಆಲ್ಬು ಕಮಾಲ್‌ನಲ್ಲಿ ಸಿರಿಯ ಮತ್ತು ಮಿತ್ರರಾಷ್ಟ್ರಗಳ ಪಡೆಗಳು ಐಸಿಸ್ ಉಗ್ರರನ್ನು ಹಿಮ್ಮೆಟ್ಟಿಸುತ್ತಾ ಮುಂದುವರಿದಿರುವಂತೆ, ಈ ನಗರದಿಂದ ಹೊರಬಿದ್ದು ಯುಪ್ರೆಟಸ್ ನದಿ ತೀರದಲ್ಲಿ ಬೀಡು ಬಿಟ್ಟಿರುವ ನಿರಾಶ್ರಿತರನ್ನು ಗುರಿಯಾಗಿಸಿಕೊಂಡು ಐಸಿಸ್ ಉಗ್ರರು ಕಾರ್ ಬಾಂಬ್ ದಾಳಿ ನಡೆಸಿರುವುದಾಗಿ ವೀಕ್ಷಕ ತಂಡದ ಮುಖ್ಯಸ್ಥ ರಾಮಿ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ. ದಾಳಿಯಿಂದ ಮೃತಪಟ್ಟ ಅಥವಾ ಸಂಕಷ್ಟಕ್ಕೊಳಗಾದವರ ನಿಖರ ಸಂಖ್ಯೆಯ ಮಾಹಿತಿ ಇದುವರೆಗೆ ತಿಳಿದು ಬಂದಿಲ್ಲ ಎಂದವರು ತಿಳಿಸಿದ್ದಾರೆ. ಸಿರಿಯನ್ ಡೆಮೊಕ್ರಟಿಕ್ ಪಡೆ(ಎಸ್‌ಡಿಎಫ್)ಗಳು ಐಸಿಸ್ ಉಗ್ರರ ಮೇಲೆ ಯುಪ್ರೆಟಿಸ್ ನದಿಯ ಪೂರ್ವ ತೀರದಿಂದ ಆಕ್ರಮಣ ನಡೆಸುತ್ತಿದ್ದರೆ ರಶ್ಯ ಬೆಂಬಲಿತ ಸಿರಿಯನ್ ಪಡೆಗಳು ನದಿಯ ಪಶ್ಚಿಮ ತೀರದಿಂದ ಆಕ್ರಮಣ ನಡೆಸುತ್ತಿವೆ. ಈ ಅವಳಿ ಆಕ್ರಮಣದ ಕಾರಣ ನಗರದ ನಿವಾಸಿಗಳು ಸುರಕ್ಷಿತ ತಾಣ ಅರಸಿ ಪಲಾಯನ ಮಾಡುತ್ತಿದ್ದಾರೆ ಎಂದು ವೀಕ್ಷಕರು ತಿಳಿಸಿದ್ದಾರೆ.





