ಭಾರತದ ಕರಾಟೆ ಅಭಿವೃದ್ಧಿಗೆ ಮಲೇಷ್ಯಾ ನೆರವು: ಕೋಚ್ ಶಿಯಾನ್ ವಸಂತನ್
ಮಂಗಳೂರು, ನ. 5: ಭಾರತದಲ್ಲಿ ಕರಾಟೆ ಕಲೆಯನ್ನು ಬೆಳೆಸಲು ಮಲೇಷ್ಯಾ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಮಲೇಷ್ಯಾದ ರಾಷ್ಟ್ರೀಯ ಕರಾಟೆ ಸಂಸ್ಥೆಯ ಮುಖ್ಯ ಕೋಚ್ ಶಿಯಾನ್ ವಸಂತನ್ ಪ್ರಕಟಿಸಿದರು.
ಭಾರತದಲ್ಲಿ ಕರಾಟೆ ಕಲಿಸುವ ಕೋಚ್‌ಗಳಿಗೆ ಗೌರವಧನ ಹೆಚ್ಚಿಸುವುದು, ಉದಯೋನ್ಮುಖ ಕರಾಟೆ ಪಟುಗಳಿಗೆ ಮಲೇಷ್ಯಾದಲ್ಲಿ ಉನ್ನತ ಮಟ್ಟದ ತರಬೇತಿ ನೀಡುವುದು ಹಾಗೂ ವಿಶ್ವದರ್ಜೆಯ ಕರಾಟೆ ಪಟುಗಳನ್ನು ತಯಾರು ಮಾಡಲು ಎಲ್ಲ ಅಗತ್ಯ ನೆರವು ನೀಡಲಿದೆ. ಮಲೇಷ್ಯಾ ಕರಾಟೆ ಸಂಸ್ಥೆಯ ಅಧ್ಯಕ್ಷ ಹಾಗೂ ಉದ್ಯಮಿ ಡಟ್ಯಾಕ್ ಪ್ಲೆಮೆಸ್ತೂ ಇದಕ್ಕೆ ಅಗತ್ಯ ಹಣಕಾಸು ನೆರವು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್‌ಗೆ ಪ್ರಮುಖ ಮೇಲ್ವಿಚಾರಕರಾಗಿ ಆಗಮಿಸಿರುವ ಅವರು ವಿವರಿಸಿದರು.
ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಸಾಧನೆ ತೋರುವ ನಾಲ್ಕು ಮಂದಿಯನ್ನು ಮಲೇಷ್ಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಟೂರ್ನಿಗೆ ಆಯ್ಕೆ ಮಾಡಲಾಗುವುದು. ವಿಶ್ವದಲ್ಲೇ ಅತಿಹೆಚ್ಚು ಸಂಖ್ಯೆಯ ಕರಾಟೆಪಟುಗಳು ಭಾರತದಲ್ಲಿ ತಯಾರಾಗುತ್ತಿದ್ದು, ಕರಾಟೆ ಕ್ಷೇತ್ರದಲ್ಲಿ ಭಾರತಕ್ಕೆ ಉಜ್ವಲ ಭಷ್ಯವಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿಯಾನ್ ವಸಂತನ್ ಅಭಿಪ್ರಾಯಪಟ್ಟರು.
ಭಾರತದಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳು ಈ ಸಮರ ಕಲೆಗೆ ಆರ್ಕಷಿತರಗುತ್ತಿರುವುದು ಉತ್ತಮ ಬೆಳವಣಿಗೆ. ಅವರಿಗೆ ಎಳವೆಯಲ್ಲೇ ಉತ್ತಮ ಮಾರ್ಗದರ್ಶನ ಹಾಗೂ ಉತ್ತೇಜನ ಸಿಕ್ಕಿದರೆ ಭಾರತದಲ್ಲೂ ವಿಶ್ವದರ್ಜೆಯ ಪಟುಗಳನ್ನು ಸಿದ್ಧಪಡಿಸಬಹುದು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕರಾಟೆ ಸೇರಿರುವುದು ಏಷ್ಯನ್ ದೇಶಗಳಲ್ಲಿ ಈ ಕಲೆಯ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದವರು ನುಡಿದರು.
ಭಾರತದ ಜತೆ ಇಂಡೋನೇಷ್ಯಾ, ಥಾಯ್ಲೆಂಡ್ ಹಾಗೂ ಸಿಂಗಾಪುರದಲ್ಲಿ ಕೂಡಾ ಉತ್ತಮ ಕರಾಟೆ ಪಟುಗಳು ರೂಪುಗೊಳ್ಳುತ್ತಿದ್ದಾರೆ. ಕರಾಟೆ ಬೆಳೆಸಲು ಭಾರತದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಉತ್ತಮ ಫಲಿತಾಂಶ ಸಿಗುತ್ತಿದೆ ಎಂದರು.ಭಾರತದಲ್ಲಿ ಉತ್ತಮ ಕರಾಟೆ ಪ್ರತಿಭೆಗಳಿದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಅವಕಾಶಗಳನ್ನು ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಲೇಷ್ಯಾ ನೆರವು ನೀಡಲಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಭಾರತವನ್ನು ಸಜ್ಜುಗೊಳಿಸುವಲ್ಲೂ ತಮ್ಮ ದೇಶ ನೆರವಾಗಲಿದೆ ಎಂದು ಶಿಯಾನ್ ವಸಂತನ್ ಹೇಳಿದರು.
ಮಕ್ಕಳಿಗೆ ಸೂಕ್ತ ತರಬೇತಿ ನೀಡಲು ಕೋಚ್‌ಗಳನ್ನು ಉತ್ತೇಜಿಸುವ ಸಲುವಾಗಿ ಅವರ ಗೌರವಧನವನ್ನು ತಕ್ಷಣದಿಂದಲೇ ಹೆಚ್ಚಿಸಲು ಮಲೇಷ್ಯಾ ಕರಾಟೆ ಸಂಸ್ಥೆ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದಲ್ಲಿ ವಿಶೇಷವಾಗಿ ಕರಾಟೆ ಕಲೆ ವೇಗವಾಗಿ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರಿನ ಮೇಯರ್ ಸ್ವತಃ ಕರಾಟೆ ಪಟುವಾಗಿ ಹೆಣ್ಣುಮಕ್ಕಳಲ್ಲಿ ಕರಾಟೆ ಕಲೆ ಜನಪ್ರಿಯಗೊಳಿಸಲು ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಟೂರ್ನಿ ಮಹತ್ವದ್ದಾಗಿದೆ ಎಂದವರು ಹೇಳಿದರು.







