ಬಿಹಾರ: ನೀರಿನಲ್ಲಿ ಮುಳುಗಿ 12 ಮಂದಿ ಸಾವು

ಪಾಟ್ನಾ, ನ. 5: ಬಿಹಾರದ ವೈಶಾಲಿ ಹಾಗೂ ಸಮಷ್ಠಿಪುರದಲ್ಲಿ ರವಿವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಐದು ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಕ್‌ನಿಕ್‌ಗೆ ಬಂದವರಲ್ಲಿ 9 ಮಂದಿ ವೈಶಾಲಿಯ ಗಂಗಾ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಸಮಷ್ಠಿಪುರ ಜಿಲ್ಲೆಯಲ್ಲಿ ದೋಣಿ ಮಗುಚಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವೈಸಾಲಿಯ ಮಸ್ತಾನಾ ಘಾಟ್ ಸಮೀಪ ಹೂಳಿನ ದಿಬ್ಬದ ಮೇಲೆ ಜಮಾಯಿಸಿದ ಸಂದರ್ಭ ಒಂದು ಮಗು ನೀರಿಗೆ ಬಿತ್ತು. ಮಗುವನ್ನು ರಕ್ಷಿಸಲು ಕೆಲವರು ನೀರಿಗೆ ಹಾರಿದರು. ಅವರೆಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಅವರಲ್ಲಿ 9 ಮೃತದೇಹಗಳು ಪತ್ತೆಯಾಗಿವೆ ಎಂದು ಫಟುಹಾ ಪೊಲೀಸ್ ಠಾಣೆಯ ಉಸ್ತುವಾರಿ ನಸೀಮ್ ಅಹ್ಮದ್ ತಿಳಿಸಿದ್ದಾರೆ.
ಈ ನಡುವೆ ಸಮಷ್ಠಿಪುರದ ಬಾಘಾಮತಿ ನದಿಯಲ್ಲಿ 12 ಮಂದಿಯನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಮೂರು ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





