ಸೌದಿ ಅರೇಬಿಯಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು
ಅಂಡರ್-19 ಎಎಫ್‌ಸಿ ಫುಟ್ಬಾಲ್ ಅರ್ಹತಾ ಪಂದ್ಯ

ದಮ್ಮಾಮ್, ನ.5: ಎಎಫ್‌ಸಿ ಅಂಡರ್ -19 ಚಾಂಪಿಯನ್‌ಶಿಪ್‌ನ ಮೊದಲ ಅರ್ಹತಾ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಭಾರತದ ಫುಟ್ಬಾಲ್ ತಂಡ 0-5 ಅಂತರದಲ್ಲಿ ಸೋಲು ಅನುಭವಿಸಿದೆ.
ಭಾರತದ ಆಟಗಾರರಿಗೆ ಏಕೈಕ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಹೀನಾಯ ಸೋಲು ಅನುಭವಿಸಿತು. 9ನೆ ನಿಮಿಷದಲ್ಲಿ ಭಾರತದ ಧೀರಜ್ ಸಿಂಗ್ ಗೋಲು ಗಳಿಸಲು ಯತ್ನಿಸಿದ್ದರು. ಆದರೆ ಪ್ರಯತ್ನ ಫಲಕಾರಿಯಾಗಲಿಲ್ಲ. ಇದರ ಬೆನ್ನಲ್ಲೇ 10ನೆ ನಿಮಿಷದಲ್ಲಿ ಸೌದಿ ತಂಡದ ಅಬ್ದುಲ್ಲಾ ಅಲ್ಲಾಮದ್ದಾನ್ ಗೋಲು ಬಾರಿಸುವ ಯತ್ನ ನಡೆಸಿದರು. ಆದರೆ ಗೋಲು ಬರಲಿಲ್ಲ.
15ನೆ ನಿಮಿಷದಲ್ಲಿ ಅನ್ವರಿ ಅಲಿ ಮಾಡಿಕೊಂಡ ಎಡವಟ್ಟಿನಿಂದಾಗಿ ಸೌದಿ ಅರೇಬಿಯಾ ಖಾತೆಗೆ ಮೊದಲ ಗೋಲು ದೊರೆಯಿತು. ಅಬ್ದುಲ್ಲಾ ಅಲ್ಲಾಮದ್ದಾನ್ ಮೊದಲ ಗೋಲು ದಾಖಲಿಸಿದರು. ಸೌದಿ ಅರೇಬಿಯಾಕ್ಕೆ 1-0 ಮುನ್ನಡೆ ಸಾಧಿಸಲು ನೆರವಾದರು. ಪ್ರಥಮಾರ್ಧದಲ್ಲಿ 1-0 ಮುನ್ನಡೆ ಸಾಧಿಸಿದ್ದ ಸೌದಿ ಅರೇಬಿಯಾ 50ನೆ ನಿಮಿಷದಲ್ಲಿ ಎರಡನೆ ಗೋಲು ಜಮೆ ಮಾಡಿತು. ಫೆರ್ರಾಸ್ ಅಲ್‌ಬ್ರಿಕಾನ್ ಗೋಲು ಗಳಿಸಿದರು. ಅಲ್ ಶಹ್ರಾನಿ 75ನೆ ನಿಮಿಷದಲ್ಲಿ ತಂಡದ ಖಾತೆಗೆ 3ನೆ ಗೋಲು ಜಮೆ ಮಾಡಿದರು.
81ನೆ ನಿಮಿಷದಲ್ಲಿ ಮತ್ತು 86ನೆ ನಿಮಿಷದಲ್ಲಿ ಫೆರ್ರಾಸ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ತಂಡದ ಭರ್ಜರಿ ಗೆಲುವಿಗೆ ನೆರವಾದರು.







