ಕಿವೀಸ್‌ಗೆ ಸರಣಿ ಸೋಲು ತಪ್ಪಿಸಿದ ಕಾಲಿನ್ ಮುನ್ರೊ ಸ್ಫೋಟಕ ಶತಕ

ರಾಜ್‌ಕೋಟ್, ನ.5: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ 40 ರನ್‌ಗಳ ಸೋಲು ಅನುಭವಿಸಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಆಡಲು ಬಾಕಿ ಇರುವಾಗಲೇ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳುವ ಭಾರತದ ಕನಸು ಈಡೇರಿಲ್ಲ. ನ್ಯೂಝಿಲೆಂಡ್ ಮೊದಲ ಪಂದ್ಯದಲ್ಲಿ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಸರಣಿ ಗೆಲುವಿನ ಕನಸನ್ನು ಈಡೇರಿಸಲು ಭಾರತ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ನ್ಯೂಝಿಲೆಂಡ್‌ಗೆ ಮುನ್ರೊ ಶತಕ ಗೆಲುವನ್ನು ತಂದು ಕೊಟ್ಟಿದೆ.
ಭಾರತದ ಕಳಪೆ ಫೀಲ್ಡಿಂಗ್ ನ್ಯೂಝಿಲೆಂಡ್‌ಗೆ ದೊಡ್ಡ ಮೊತ್ತದ ಸ್ಕೋರ್ ದಾಖಲಿಸಲು ಸಹಾಯ ಮಾಡಿದೆ. ಮೂರು ಬಾರಿ ಜೀವದಾನ ಪಡೆದಿದ್ದ ಮುನ್ರೊ ಎರಡನೆ ಸೊಗಸಾದ ಶತಕ ದಾಖಲಿಸಿದ್ದರು.
ಮುನ್ರೊ ಶತಕದ ಫಲವಾಗಿ ನ್ಯೂಝಿಲೆಂಡ್ ಭಾರತದ ಗೆಲುವಿಗೆ 197 ರನ್‌ಗಳ ಕಠಿಣ ಸವಾಲು ವಿಧಿಸಿತ್ತು. ಭಾರತ ಗೆಲುವಿನ ಸವಾಲನ್ನು ಬೆನ್ನಟ್ಟುವ ಹಂತದಲ್ಲಿ ಆರಂಭಿಕ ದಾಂಡಿಗರರಾದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಅವರು ಟ್ರೆಂಟ್ ಬೌಲ್ಟ್ ದಾಳಿಯನ್ನು ಎದುರಿಸಲಾರದೆ ಬೇಗನೆ ಪೆವಿಲಿಯನ್ ಸೇರಿದ್ದರು.
ನಾಯಕ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿರುವ ತನಕ ಭಾರತದ ಗೆಲ್ಲುವ ಕನಸು ಜೀವಂತವಾಗಿತ್ತು. ಆದರೆ 17ನೆ ಓವರ್‌ನ ಮೂರನೆ ಎಸೆತದಲ್ಲಿ ಕೊಹ್ಲಿ ಔಟಾಗುವುದರೊಂದಿಗೆ ಗೆಲುವಿನ ಕನಸು ಮಣ್ಣುಗೂಡಿತು.
ಕೊಹ್ಲಿ 65 ರನ್(42ಎ, 8ಬೌ,1ಸಿ) ಗಳಿಸಿದರು. ಅವರು 18ನೆ ಅರ್ಧಶತಕ ದಾಖಲಿಸಿದರು. ಧವನ್ ಮತ್ತು ರೋಹಿತ್ ನಿರ್ಗಮನದ ಬಳಿಕ ತಂಡವನ್ನು ನಾಯಕ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಆಧರಿಸುವ ಯತ್ನ ನಡೆಸಿದರು. ಅವರು ಮೂರನೆ ವಿಕೆಟ್‌ಗೆ 54 ರನ್ ಜಮೆ ಮಾಡಿದರು.ಅಯ್ಯರ್ 23 ರನ್(21ಎ,4ಬೌ) ಗಳಿಸಿ ಕಾಲಿನ್ ಮುನ್ರೊಗೆ ರಿಟರ್ನ್ ಕ್ಯಾಚ್ ನೀಡುವ ಮೂಲಕ ವಿಕೆಟ್ ಒಪ್ಪಿಸಿದರು.
ಹಾರ್ದಿಕ್ ಪಾಂಡ್ಯ1 ರನ್ ಗಳಿಸಿ ಸೋಧಿಗೆ ವಿಕೆಟ್ ಒಪ್ಪಿಸಿದರು. ಆಗ 9.1 ಓವರ್‌ಗಳಲ್ಲಿ ತಂಡದ ಸ್ಕೋರ್ 4 ವಿಕೆಟ್ ನಷ್ಟದಲ್ಲಿ 47 ಆಗಿತ್ತು. ಬಳಿಕ ನಾಯಕ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಹೋರಾಟ ನಡೆಸಿ ಜೊತೆಯಾಟದಲ್ಲಿ ತಂಡದ ಸ್ಕೋರ್‌ನ್ನು 123ಕ್ಕೆ ಏರಿಸಿದರು. ಐದನೆ ವಿಕೆಟ್‌ಗೆ 76 ರನ್‌ಗಳನ್ನು ಜಮೆ ಮಾಡಿದರು. ಆದರೆ ಅವರಿಗೆ ತಂಡವನ್ನು ಕಷ್ಟದಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಕ್ಷರ್ ಪಟೇಲ್ (5) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.19.3ನೆ ಓವರ್‌ನಲ್ಲಿ ಧೋನಿ ಹೋರಾಟ ಅಂತ್ಯಗೊಳಿಸಿದರು. ಅವರು 1 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ಧೋನಿ 49 ರನ್(37ಎ, 2ಬೌ,3ಸಿ) ಗಳಿಸಿದರು. ಟ್ರೆಂಟ್ ಬೌಲ್ಟ್ 4 ವಿಕೆಟ್(4-0-34-4 ) ಪಡೆದು ಮಿಂಚಿದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಝಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 196 ರನ್ ಸೇರಿಸಿತ್ತು. ಮುನ್ರೊ ಮತ್ತು ಗಪ್ಟಿಲ್ ಮೊದಲ ವಿಕೆಟ್‌ಗೆ 105 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿಕೊಟ್ಟಿದ್ದರು.ಮುನ್ರೊ ಔಟಾಗದೆ 109 ರನ್(58ಎ, 7ಬೌ, 7ಸಿ) ಗಳಿಸಿದರು. ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಾಲ್‌ರ ಮೊದಲ ಓವರ್‌ನಲ್ಲಿ 2 ಸಿಕ್ಸರ್ ಮತ್ತು 1 ಸಿಕ್ಸರ್ ಬಾರಿಸಿದ್ದರು. ಇವರಿಗೆ ಮೊದಲ ವಿಕೆಟ್‌ಗೆ ಸಾಥ್ ನೀಡಿದ್ದ ಮಾರ್ಟಿನ್ ಗಪ್ಟಿಲ್ 45 ರನ್(41ಎ, 3ಬೌ,3ಸಿ) ಗಳಿಸಿದರು. ನಾಯಕ ಕೇನ್ ವಿಲಿಯಮ್ಸನ್ 12 ರನ್ ಗಳಿಸಿ ಮುಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸಿರಾಜ್ (4-0-53-1)ತನ್ನ ಚೊಚ್ಚಲ ಪಂದ್ಯದಲ್ಲಿ ಮೊದಲ ವಿಕೆಟ್ ಪಡೆದರು. ಸಿರಾಜ್ ಮೊದಲ 2 ಓವರ್‌ಗಳಲ್ಲಿ 26 ರನ್ ನೀಡಿದ್ದರು.ಮುನ್ರೊ ಅವರು ಸಿರಾಜ್ ಓವರ್‌ನಲ್ಲಿ 2 ಸಿಕ್ಸರ್ ಸಿಡಿಸಿದ್ದರು.
ಹೈಲೈಟ್ಸ್
►ರಾಜ್‌ಕೋಟ್‌ನಲ್ಲಿ ಅ.10, 2013ರಲ್ಲಿ ಆಸ್ಟ್ರೇಲಿಯ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿದ್ದ ಭಾರತ ಇದೀಗ ನ್ಯೂಝಿಲೆಂಡ್ ವಿರುದ್ಧ 40ರನ್‌ಗಳ ಸೋಲು ಅನುಭವಿಸಿದೆ.
►ಮಹೇಂದ್ರ ಸಿಂಗ್ ಧೋನಿ(49) ಅವರು 1 ರನ್‌ನಿಂದ ಎರಡನೆ ಅರ್ಧಶತಕ ವಂಚಿತಗೊಂಡರು. ನ್ಯೂಝಿಲೆಂಡ್ ವಿರುದ್ಧ ಅವರ ಹಿಂದಿನ ಗರಿಷ್ಠ ಸ್ಕೋರ್ 30 ರನ್.
►ಟ್ರೆಂಟ್ ಬೌಲ್ಟ್ 32ಕ್ಕೆ 4 ವಿಕೆಟ್ ಪಡೆಯುವ ಮೂಲಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
►ಟ್ರೆಂಟ್ ಬೌಲ್ಟ್ ಭಾರತದ ವಿರುದ್ಧ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 4 ವಿಕೆಟ್ ಪಡೆದ ನ್ಯೂಝಿಲೆಂಡ್‌ನ ಮೊದಲ ಬೌಲರ್.
►ಗಪ್ಟಿಲ್ ಮತ್ತು ಮುನ್ರೊ ಮೊದಲ ವಿಕೆಟ್‌ಗೆ 105 ರನ್‌ಗಳ ಜೊತೆಯಾಟ ನೀಡಿರುವುದು ನ್ಯೂಝಿಲೆಂಡ್ ಆಟಗಾರರ ಹೊಸ ದಾಖಲೆ.
►ನ್ಯೂಝಿಲೆಂಡ್ ತಂಡದ ಆಟಗಾರರು ಟ್ವೆಂಟಿ-20 ಕ್ರಿಕೆಟ್‌ನಲ್ಲಿ 7ನೆ ಬಾರಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದ್ದಾರೆ.
►ಕಾಲಿನ್ ಮುನ್ರೊ ಒಂದೇ ವರ್ಷ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 2 ಶತಕದ ದಾಖಲಿಸಿದ ವಿಶ್ವದ ಮೊದಲ ಆಟಗಾರ.
►ಮುನ್ರೊ ಭಾರತದ ವಿರುದ್ಧ ಶತಕ ದಾಖಲಿಸಿದ ನ್ಯೂಝಿಲೆಂಡ್‌ನ ಮೊದಲ ಆಟಗಾರ.
►ನ್ಯೂಝಿಲೆಂಡ್‌ನ ಮೂವರು ಆಟಗಾರರು ಟ್ವೆಂಟಿ-20ಯಲ್ಲಿ 5 ಶತಕ ದಾಖಲಿಸಿದ್ದರು. ಮುನ್ರೊ ಮತ್ತು ಮೆಕಲಮ್ ತಲಾ 2 ಶತಕ ಮತ್ತು ಮಾರ್ಟಿನ್ ಗಪ್ಟಿಲ್ 1 ಶತಕ ದಾಖಲಿಸಿದ್ದಾರೆ.
►ಮುನ್ರೊ 4ನೆ ಬಾರಿ ಟ್ವೆಂಟಿ-20ಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
►ವಿರಾಟ್ ಕೊಹ್ಲಿ 18ನೆ ಅರ್ಧಶತಕ ದಾಖಲಿಸಿದ್ದಾರೆ.
►ಟ್ವೆಂಟಿ-20ಯಲ್ಲಿ 200 ಬೌಂಡರಿ ದಾಖಲಿಸಿದ ವಿಶ್ವದ ಮೂರನೆ ಆಟಗಾರ.
►ಮುಹಮ್ಮದ್ ಸಿರಾಜ್ (4-0-53-1) ಪಂದ್ಯಕ್ಕೆ ಪಾದಾರ್ಪಣೆಯಲ್ಲೇ ದುಬಾರಿ ರನ್ ಬಿಟ್ಟುಕೊಟ್ಟಿದ್ದಾರೆ.







