ನ.12 ರಿಂದ ಉಚಿತ ಮಾಹಿತಿ ಶಿಬಿರ
ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ
ಬೆಂಗಳೂರು, ನ. 6: ಜ್ಯೋತಿ ಗಾಯನ ಸಭಾ ವತಿಯಿಂದ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಉಚಿತ ಮಾಹಿತಿ ಶಿಬಿರವನ್ನು ನ.12 ರಿಂದ 18 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಭಾದ ನಿರ್ದೇಕ ಭಾಗಪ್ಪ ಗೊರನಾಳ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19 ನೆ ಸಾಲಿಗೆ 6 ನೆ ತರಗತಿಗೆ ಪ್ರತಿಭಾವಂತ ಬಾಲಕ-ಬಾಲಕಿಯರ ದಾಖಲಾತಿಗೆ ಪ್ರವೇಶ ಪರೀಕ್ಷೆಗಳು ಫೆ.10 ರಂದು ನಡೆಯಲಿದ್ದು, ಅರ್ಜಿ ಸಲ್ಲಿಸಲು ನ.25 ರಂದು ಕೊನೆ ದಿನಾಂಕವಾಗಿದೆ. ಹೀಗಾಗಿ, ಆಸಕ್ತ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಮಾಹಿತಿ ನೀಡುವ ಸಲುವಾಗಿ ಈ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ಮತ್ತು ಪರೀಕ್ಷೆಯ ಪೂರ್ವ ಭಾವಿ ಸಿದ್ಧತೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಶಿಬಿರವು ಇಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೊಗೂರು ರಸ್ತೆಯಲ್ಲಿರುವ ಪಟೇಲ್ ಬಿಲ್ಡಿಂಗ್‌ನಲ್ಲಿ ನಡೆಯಲಿದೆ ಎಂದು ಹೇಳಿದರು.
ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕನುಗುಣವಾಗಿ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ, ಗುಣಮಟ್ಟದ ಆಧುನಿಕ ಶಿಕ್ಷಣ ಒದಗಿಸುವುದು, ನೈತಿಕ ಶಿಕ್ಷಣ, ಪರಿಸರ ಶಿಕ್ಷಣ, ಸಾಂಸ್ಕೃತಿಕ ಮತ್ತು ಸೌಂದರ್ಯಾತ್ಮಕ ವೌಲ್ಯಗಳನ್ನು ಬಿತ್ತಿ ಬೆಳೆಸುವುದು ಮತ್ತು ಮೂರು ಭಾಷೆಗಳಲ್ಲಿ ನೈಪುಣ್ಯತೆಯನ್ನು ಬೆಳೆಸುವುದು, ಅನುಭವಗಳನ್ನು ಹಂಚಿಕೊಳ್ಳುವ ಮೂಲಕ, ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಮೂಲಕ ಶಾಲಾ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವುದು ನವೋದಯ ಶಾಲೆಗಳ ಉದ್ದೇಶವಾಗಿದೆ ಎಂದರು.
ಅರ್ಜಿ ಸಲ್ಲಿಸುವುದು ಹೇಗೆ: ಮಾಹಿತಿಗಾಗಿ ಸ್ಥಳೀಯ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಬಹುದು. ನವೋದಯ ವಿದ್ಯಾಲಯ ಸಮಿತಿಯ ವೆಬ್‌ಸೈಟ್ www.navodaya.nic.in ನಲ್ಲಿ ಒದಗಿಸಲಾದ ಅರ್ಜಿ ನಮೂನೆ ಪಡೆದು, ವಿದ್ಯಾರ್ಥಿ 5 ನೆ ತರಗತಿ ಓದುತ್ತಿರುವ ಶಾಲೆಯ ದಾಖಲಾತಿಯನ್ನು ಶಾಲೆಯ ಮುಖ್ಯೋಪಾದ್ಯಾಯರಿಂದ ಸಹಿ ಮತ್ತು ಮೊಹರನ್ನು ಪಡೆದು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಮತ್ತು ಅರ್ಜಿಯನ್ನು ವೆಬ್‌ಸೈಟ್ ಮೂಲಕ ಪಡೆಯಬಹುದಾಗಿದೆ. ಹಾಗೂ 9164238366, 99723 84538 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.







