ರಾಜ್ಯದ ಎಲ್ಲ ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ 247 ‘ಇಂದಿರಾ ಕ್ಯಾಂಟೀನ್’

ಬೆಂಗಳೂರು, ನ. 6: ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭಗೊಂಡಿರುವ ‘ಇಂದಿರಾ ಕ್ಯಾಂಟೀನ್’ ಮಾದರಿಯಲ್ಲೇ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಹೊಸದಾಗಿ ಒಟ್ಟು 247 ಕ್ಯಾಂಟೀನ್ ಸ್ಥಾಪಿಸಲು ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
25 ಸಾವಿರ ಜನಸಂಖ್ಯೆಯುಳ್ಳ ಪಟ್ಟಣದಲ್ಲಿ ಒಂದು ಹೊತ್ತಿಗೆ 200 ಜನರಿಗೆ, 45 ಸಾವಿರ ಜನಸಂಖ್ಯೆ ಇರುವ ಪಟ್ಟಣದಲ್ಲಿ 300 ಮಂದಿಗೆ ಹಾಗೂ 45 ಸಾವಿರದಿಂದ 1ಲಕ್ಷ ಜನಸಂಖ್ಯೆ ಇರುವ ನಗರದಲ್ಲಿ 500 ಜನರಿಗೆ ಉಪಾಹಾರ ಮತ್ತು ಊಟದ ಮಿತಿಗೊಳಿಸಲಾಗಿದೆ.
1 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇದ್ದರೆ ಅಲ್ಲಿ ಪ್ರತೀ ಲಕ್ಷ ಜನಸಂಖ್ಯೆಗೆ 1 ಕ್ಯಾಂಟೀನ್ ಹೆಚ್ಚುವರಿಯಾಗಿ ಆರಂಭಿಸಲು ಸೂಚಿಸಲಾಗಿದೆ. ಒಂದು ಅಥವಾ ಎರಡು ಕ್ಯಾಂಟೀನ್ ಅಗತ್ಯ ಇರುವ ನಗರದಲ್ಲಿ ಅಡುಗೆ ಕೋಣೆ ಹೊಂದಿರುವ ಕ್ಯಾಂಟೀನ್‌ಗಳು, 2ಕ್ಕೂ ಹೆಚ್ಚಿನ ಕ್ಯಾಂಟೀನ್ ಅಗತ್ಯವಿದ್ದರೆ ಪ್ರತ್ಯೇಕ ಅಡುಗೆ ಮನೆ ನಿರ್ಮಿಸಲು ನಿರ್ಧರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5, ಮೈಸೂರು-11, ತುಮಕೂರು-4, ದಾವಣಗೆರೆ-8, ಶಿವಮೊಗ್ಗ-4, ಬೆಳಗಾವಿ-6, ವಿಜಯಪುರ-4, ಧಾರವಾಡ-12, ಕಲಬುರಗಿ-7, ರಾಯಚೂರು-3, ಬೀದರ್-3, ಬಳ್ಳಾರಿ-5 ಮತ್ತು ಹೊಸಪೇಟೆಯಲ್ಲಿ-3 ಕ್ಯಾಂಟೀನ್ ನಿರ್ಮಿಸಲು ಉದ್ದೇಶಿಸಿದ್ದು, ಇಲ್ಲಿ ಪ್ರತ್ಯೇಕ ಅಡುಗೆ ಮನೆಗಳನ್ನು ನಿರ್ಮಿಸಿ ಕ್ಯಾಂಟೀನ್‌ಗೆ ಆಹಾರ ಪೂರೈಸಲು ತೀರ್ಮಾನಿಸಲಾಗಿದೆ.
ಹಾಸನ, ರಾಮನಗರ, ಚಿತ್ರದುರ್ಗ, ಮಂಡ್ಯ, ಚಿಕ್ಕಮಗಳೂರು, ಉಡುಪಿ, ಬಾಗಲಕೋಟೆ, ಗದಗ ಮತ್ತು ಭದ್ರಾವತಿಯಲ್ಲಿ ತಲಾ ಎರಡು ಅಡುಗೆ ಮನೆ ಸಹಿತ ಕ್ಯಾಂಟೀನ್, ಉಳಿದ ಎಲ್ಲ ನಗರ ಮತ್ತು ಪಟ್ಟಣಗಳಲ್ಲಿ ತಲಾ ಒಂದು ಅಡುಗೆ ಮನೆ ಸಹಿತ ಕ್ಯಾಂಟೀನ್ ನಿರ್ಮಿಸಲು ನಿರ್ಧರಿಸಲಾಗಿದೆ.
ಸಮಿತಿ: ಕ್ಯಾಂಟೀನ್‌ಗಳ ನಿರ್ವಹಣೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಹತ್ತು ಮಂದಿ ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಿದ್ದು, ಸಮಿತಿಯಲ್ಲಿ ಆಹಾರ, ಆರೋಗ್ಯ, ಪೊಲೀಸ್, ನಗರ ಸ್ಥಳೀಯ ಸಂಸ್ಥೆ, ಕಾರ್ಮಿಕ ಇಲಾಖೆ, ಕೆಎಸ್ಸಾರ್ಟಿಸಿ ಅಧಿಕಾರಿಗಳಿದ್ದಾರೆ.







