ಲಾರಿ ಮಾಲಕರ ಮುಷ್ಕರ ಮುಂದೂಡಿಕೆ

ಬೆಂಗಳೂರು, ನ.6: ಭಾರಿ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಲು ಮುಂದಾಗಿರುವುದನ್ನು ಖಂಡಿಸಿ, ವಾಹನಗಳಿಗೆ ವಿಧಿಸುವ ಶುಲ್ಕವನ್ನು ಮೂರು ಪಟ್ಟು ಹೆಚ್ಚಳ ಮಾಡಿರುವುದು ಕಡಿಮೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ನ.10 ರಿಂದ ಲಾರಿ ಮಷ್ಕರ ನಡೆಸಲು ಮುಂದಾಗಿದ್ದ ಲಾರಿ ಮಾಲಕರ ಸಂಘ ಇದೀಗ ತಾತ್ಕಾಲಿಕವಾಗಿ ಮುಷ್ಕರವನ್ನು ಮುಂದೂಡಲಾಗಿದೆ.
ರಾಜ್ಯ ಲಾರಿ ಮಾಲಕರ ಸಂಘಟನೆಗಳ ಒಕ್ಕೂಟದ ಮುಖಂಡರೊಂದಿಗೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾತುಕತೆ ನಡೆಸಿದ್ದು, ಬೇಡಿಕೆಗಳ ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ, ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲು ಲಾರಿ ಮಾಲಕರ ಸಂಘಟನೆಗಳು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಆರ್‌ಟಿಒ ಅಧಿಕಾರಿಗಳಿಂದ ಕಿರುಕುಳ, ಟೋಲ್ ಸೇರಿದಂತೆ ವಿವಿಧ ಲಾರಿ ಮಾಲಕರ ಬೇಡಿಕೆಗಳ ಕುರಿತು ಸರಕಾರಕ್ಕೆ ಅರಿವಿದೆ. ಹೀಗಾಗಿ, ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಬಗೆಹರಿಸುವುದಾಗಿ ಸಾರಿಗೆ ಸಚಿವ ರೇವಣ್ಣ ಸಂಘಟನೆಗಳ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಹೀಗಾಗಿ, ಸರಕಾರದ ಭರವಸೆಯಂತೆ ಬೇಡಿಕೆಗಳು ಈಡೇರಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರಿಸದಿದ್ದ ಪಕ್ಷದಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ರಾಜ್ಯ ಸರಕಾರದ ಕೆಲವೊಂದು ನೀತಿಗಳಿಂದ ಲಾರಿ ಮಾಲಕರು ಸಂಕಷ್ಟ ಎದುರಿಸುವಂತಾಗಿದೆ. ಇದರಿಂದಾಗಿ ಸಮಸ್ಯೆಗೆ ಸಿಲುಕಿದ್ದಾರೆ. ಅಲ್ಲದೆ, ಇತ್ತೀಚಿಗೆ ಬಂದ ಜಿಎಸ್‌ಟಿ ದರ ಏರಿಕೆಯಿಂದಾಗಿ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕುವಂತೆ ಸಭೆಯಲ್ಲಿ ಸಚಿವರನ್ನು ಮುಖಂಡರು ಒತ್ತಾಯಿಸಿದ್ದಾರೆ.







