ತನಿಖೆ ನಡೆಸಲು ಸರಕಾರದ ನಿರ್ದೇಶಕ್ಕಾಗಿ ಕಾಯುತ್ತಿದ್ದಾರೆ ತೆರಿಗೆ ಅಧಿಕಾರಿಗಳು
ಪ್ಯಾರಡೈಸ್ ದಾಖಲೆಗಳ ಸೋರಿಕೆ

ಹೊಸದಿಲ್ಲಿ,ನ.6: ತೆರಿಗೆ ಅಧಿಕಾರಿಗಳು ನೂರಾರು ಭಾರತೀಯರು ನಡೆಸಿದ್ದಾರೆನ್ನಲಾದ ತೆರಿಗೆ ವಂಚನೆಗಳನ್ನು ಬಹಿರಂಗಗೊಳಿಸಿರುವ ಪ್ಯಾರಡೈಸ್ ದಾಖಲೆಗಳ ಅಧ್ಯಯನವನ್ನು ಮಾಡಲಿದ್ದಾರೆ, ಆದರೆ ಯಾವುದೇ ತನಿಖೆಯನ್ನು ಕೈಗೊಳ್ಳುವ ಬಗ್ಗೆ ನಿರ್ಧಾರಕ್ಕೆ ಮುನ್ನ ಕೇಂದ್ರದ ನಿರ್ದೇಶಕ್ಕಾಗಿ ಕಾಯಲಿದ್ದಾರೆ ಎಂದು ಸರಕಾರದಲ್ಲಿಯ ಮೂಲಗಳು ಸೋಮವಾರ ತಿಳಿಸಿವೆ.
ವಿದೇಶಗಳಲ್ಲಿ ಖಾತೆಯನ್ನು ತೆರೆಯುವುದನ್ನು ಭಾರತೀಯ ಅಧಿಕಾರಿಗಳಿಂದ ಮುಚ್ಚಿಡದಿದ್ದರೆ ಅದು ಅಕ್ರಮವಲ್ಲ ಎಂದು ಹೇಳಿದ ತೆರಿಗೆ ಅಧಿಕಾರಿಯೋರ್ವರು, ಈ ದಾಖಲೆಗಳನ್ನು ನಾವು ಅಧ್ಯಯನ ಮಾಡಿ ಬಳಿಕ ಯಾವುದೇ ಅಕ್ರಮ, ತೆರಿಗೆ ವಂಚನೆ ನಡೆದಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ನಮ್ಮ ಬಳಿಯಿರುವ ದತ್ತಾಂಶಗಳೊಂದಿಗೆ ತಾಳೆ ಹಾಕುವುದು ಅಗತ್ಯವಾಗಿದೆ ಎಂದರು.
ಸೋರಿಕೆಯಾಗಿರುವ ದಾಖಲೆಗಳಲ್ಲಿ ಹೆಸರಿಸಲಾಗಿರುವ ಆ್ಯಪಲ್‌ಬೈನ ಪ್ರತಿಷ್ಠಿತ ಭಾರತೀಯ ಗ್ರಾಹಕರ ಪೈಕಿ ಹಲವರು ಹಣಕಾಸು ಅಪರಾಧಗಳ ಆರೋಪದಲ್ಲಿ ಈಗಾಗಲೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳಿಂದ ತನಿಖೆಗೊಳ ಗಾಗಿದ್ದಾರೆ.
ಕಾರ್ಪೊರೇಟ್ ಸಂಸ್ಥೆಗಳು ಸಾಗರೋತ್ತರ ಕಂಪನಿಗಳನ್ನು ಸ್ಥಾಪಿಸಿದ ಪ್ರಕರಣಗಳಲ್ಲಿ ಇವುಗಳನ್ನು ಉದಾರೀಕೃತ ರವಾನೆ ಯೋಜನೆಯಡಿ ಆರ್‌ಬಿಐನ ಅನುಮತಿಯೊಂದಿಗೆ ಸ್ಥಾಪಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯವು ಮೊದಲು ವಿಚಾರಣೆಗೆ ಆದೇಶಿಸುತ್ತದೆ ಎಂದು ಮೂಲಗಳು ತಿಳಿಸಿದವು.







