ಜಲ್ಲಿಕಟ್ಟು ಶಾಸನ ರದ್ದತಿಗೆ ‘ಪೆಟಾ’ ಮನವಿ ಹಿನ್ನೆಲೆ: ತಮಿಳುನಾಡು ಸರಕಾರಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ, ನ.6: ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ನೂತನ ಜಲ್ಲಿಕಟ್ಟು ಶಾಸನವನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಹಿನ್ನೆಲೆಯಲ್ಲಿ, ತಮಿಳುನಾಡು ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಾಣಿಗಳ ಹಕ್ಕುಗಳ ಬಗ್ಗೆ ಕಾರ್ಯನಿರ್ವಹಿಸುವ ‘ಪೆಟಾ’ (ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್) ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ನ್ಯಾಯಪೀಠವು, ನಾಲ್ಕು ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. ರಾಜ್ಯದ ಐದು ವಲಯಗಳಲ್ಲಿ ನಡೆದಿರುವ ಜಲ್ಲಿಕಟ್ಟು ಕಾರ್ಯಕ್ರಮದ ವೀಡಿಯೊ ದೃಶ್ಯಾವಳಿಯನ್ನು ಅರ್ಜಿಯ ಜೊತೆಗೆ ಲಗತ್ತೀಕರಿಸಲಾಗಿದ್ದು ಜಲ್ಲಿಕಟ್ಟು ಸಂದರ್ಭ ಹೋರಿಗಳನ್ನು ಹಿಂಸಾತ್ಮಕ ರೀತಿಯಲ್ಲಿ ನಡೆಸಿಕೊಳ್ಳುವುದನ್ನು ವೀಡಿಯೊದಲ್ಲಿ ದಾಖಲಿಸಲಾಗಿದೆ ಎಂದು ‘ಪೆಟಾ’ ತಿಳಿಸಿದೆ. ಮಧುರೈ ಜಿಲ್ಲೆಯ ಅವನಿಪುರಮ್, ಪಾಲಮೇಡು ಹಾಗೂ ಅಳಂಗನಲ್ಲೂರು , ಡಿಂಡಿಗಲ್ ಜಿಲ್ಲೆಯ ಮರವಾಪಟ್ಟಿ ಹಾಗೂ ಪುದುಕೊಟ್ಟೈ ಜಿಲ್ಲೆಯ ತಿರುನಲ್ಲೂರು ಪ್ರದೇಶಗಳಲ್ಲಿ ನಡೆದಿರುವ ಜಲ್ಲಿಕಟ್ಟು ಕಾರ್ಯಕ್ರಮದ ಛಾಯಾಚಿತ್ರ, ವೀಡಿಯೋ ದೃಶ್ಯಾವಳಿ ಸಹಿತ ತಾನು ಸಂಗ್ರಹಿಸಿದ ತನಿಖಾ ವರದಿಯನ್ನು ‘ಪೆಟಾ’ ಸಲ್ಲಿಸಿದೆ.
ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಹೋರಿಗಳಿಗೆ ಪ್ರಾಣಭೀತಿ ಒಡ್ಡುವ ಮೂಲಕ ಅವುಗಳನ್ನು ಬಲವಂತವಾಗಿ ಓಡುವಂತೆ ಮಾಡಲಾಗುತ್ತದೆ. ಹೋರಿಗಳ ಮೇಲಾಗುವ ಹಿಂಸೆಯನ್ನು ವೀಡಿಯೊ ದಾಖಲೆ ಸಹಿತ ಒದಗಿಸಲಾಗಿದೆ. ಈ ಓಟದ ಸಂದರ್ಭ ಕುಸಿದು ಬೀಳುವ ಹೋರಿಗಳನ್ನು ಉಪಚರಿಸುವ ಬದಲು, ಅವುಗಳನ್ನು ಎದ್ದುನಿಂತು ಓಟ ಮುಂದುವರಿಸಲು ಬಲವಂತ ಮಾಡಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಹೋರಿಗಳ ಎಲುಬು, ಬಾಲ ಮುರಿಯುತ್ತದೆ. ಹೋರಿಗಳನ್ನು ಚೂಪಾದ ಆಯುಧಗಳಿಂದ ಇರಿಯಲಾಗುತ್ತದೆ. ಮೂಗುದಾರವನ್ನು ಬಲವಾಗಿ ಹಿಡಿದೆಳೆಯುವಾಗ ಮೂಗಿನಿಂದ ರಕ್ತ ಸುರಿಯುತ್ತದೆ. ಇಂತಹ ಹಲವಾರು ಹಿಂಸಾತ್ಮಕ ಪ್ರಯೋಗಗಳಿಗೆ ಸಿಲುಕುವ ಹೋರಿಗಳು ತೀವ್ರ ಗಾಯಗೊಳ್ಳುತ್ತವೆ. ಕೆಲವೊಮ್ಮೆ ಹೋರಿಗಳ ಜತೆ ಮನುಷ್ಯರು ಕೂಡಾ ಸಾವನ್ನಪ್ಪುವ ಅಪಾಯವಿರುತ್ತದೆ ಎಂದು ‘ಪೆಟಾ’ದ ಅರ್ಜಿಯಲ್ಲಿ ತಿಳಿಸಲಾಗಿದೆ.
2017ರ ಜಲ್ಲಿಕಟ್ಟು ಶಾಸನದಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಐದು ಪ್ರಮುಖ ಹಕ್ಕನ್ನು ಕಸಿದುಕೊಂಡಂತಾಗಿದೆ. ಹಸಿವು ಮತ್ತು ಬಾಯಾರಿಕೆಯಿಂದ ಮುಕ್ತವಾಗುವ ಸ್ವಾತಂತ್ರ, ಭೀತಿ ಹಾಗೂ ಯಾತನೆಯಿಂದ ಮುಕ್ತವಾಗುವ ಸ್ವಾತಂತ್ರ, ದೈಹಿಕ ಹಾಗೂ ತಾಪದಿಂದಾಗುವ ಅಸ್ವಸ್ಥತೆಯಿಂದ, ನೋವಿನಿಂದ ಮುಕ್ತವಾಗುವ ಸ್ವಾತಂತ್ರ ಹಾಗೂ ಸಹಜವಾಗಿ ವರ್ತಿಸುವ ಸ್ವಾತಂತ್ರ ಮತ್ತು ಹಕ್ಕು- ಇವನ್ನು ಜಲ್ಲಿಕಟ್ಟು ಕ್ರೀಡೆ ಕಸಿದುಕೊಂಡಿದೆ ಎಂದು ತನಿಖಾ ವರದಿಯಲ್ಲಿ ‘ಪೆಟಾ’ ಉಲ್ಲೇಖಿಸಿದೆ. ಈ ಐದು ಹಕ್ಕುಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾಣಿಗಳ ಆರೋಗ್ಯದ ವಿಭಾಗವು ಮಾನ್ಯ ಮಾಡಿದ್ದು , ಭಾರತವೂ ಈ ಸಂಘಟನೆಯ ಸದಸ್ಯತ್ವ ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2017ರಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಜಲ್ಲಿಕಟ್ಟು ನಿಷೇಧ ತೆರವುಗೊಳಿಸಿ ಶಾಸನ ಹೊರಡಿಸಿದ ಬಳಿಕ ರಾಜ್ಯದ ವಿವಿಧೆಡೆ ನಡೆದ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಕನಿಷ್ಟ ಐದು ಹೋರಿಗಳು ಹಾಗೂ 15 ಮಂದಿ ಬಲಿಯಾಗಿದ್ದು 1,948ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. 2014ರಲ್ಲಿ ಸುಪ್ರೀಂಕೋರ್ಟ್ ಜಲ್ಲಿಕಟ್ಟು ನಿಷೇಧಿಸಿದ ಬಳಿಕ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪರವಾಗಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆಸಲು ಅವಕಾಶ ಮಾಡಿಕೊಡುವ ಶಾಸನವನ್ನು 2017ರಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.







