15ನೆ ಶತಮಾನದಲ್ಲೇ ಕನಕದಾಸರು ಯುವ ಪೀಳಿಗೆಗೆ ಚೈತನ್ಯ ತುಂಬಿದ್ದಾರೆ: ಪ್ರಾಣೇಶ್

ಮೂಡಿಗೆರೆ, ನ.6: 15ನೆ ಶತಮಾನದಲ್ಲೇ ಕನಕದಾಸರು ಯುವ ಪೀಳಿಗೆಗೆ ಚೈತನ್ಯ ತುಂಬುವ ಮೂಲಕ ಜಾತಿ, ಮತ, ಬೇಧಗಳಿಗೆ ಕಡಿವಾಣ ಹಾಕಿ ಶತಮಾನದ ಸರ್ವಶ್ರೇಷ್ಠರ ಸಾಲಿನಲ್ಲಿ ಮೊದಲಿಗರು ಎಂದು ಎಂಎಲ್‍ಸಿ ಎಂ.ಕೆ.ಪ್ರಾಣೇಶ್ ಬಣ್ಣಿಸಿದ್ದಾರೆ.
ಸೋಮವಾರ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿದಿಂದ ಕನಕದಾಸರ 530ನೆ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಕೈಬೆರಳು ಒಂದೇ ರೀತಿ ಇಲ್ಲವಾದ್ದರಿಂದ ಮನುಷ್ಯ ಸಂಬಂಧಗಳು ಜಾತಿ, ಮತ, ಪಂಥದ ಮೂಲಕ ಒಡಕು ಬರುತ್ತದೆ. ಆದ್ದರಿಂದ 15ನೆ ಶತಮಾನದಲ್ಲಿಯೇ ಕುಲ ಕುಲವೆಂದು ಒಡೆದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ. ಅಂದಿನ ಅವರ ಮಾತು ಇಂದಿನ ಪೀಳಿಗೆಗೆ ಸಮರ್ಪಕವಾಗಿದೆ ಎಂದು ವಿವರಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಮಂಜಪ್ಪ ಉಪನ್ಯಾಸ ನೀಡಿ ಮಾತನಾಡಿ, ವ್ಯಾಸರಾಯರ ಶಿಷ್ಯರ ಪೈಕಿ ಕನಕದಾಸರೊಬ್ಬರೇ ಶೂದ್ರರಾಗಿದ್ದರು. ಆದರೂ ಗುರು ವ್ಯಾಸರಾಯರಿಗೆ ಪ್ರೀತಿಯ ಶಿಷ್ಯರಾಗಿ ಕನಕದಾಸರು ಮೋಹನ ತರಂಗಿಣಿ, ನಳಚರಿತ್ರೆ ಸಹಿತ 5 ಪುಸ್ತಕಗಳನ್ನು ಅಂದಿನ ಸಾಹಿತ್ಯದ ರೂಪದಲ್ಲಿ ಬರೆದು ಅದೇ ಸಾಹಿತ್ಯಕಥೆಯನ್ನು ಸಮಾಜಕ್ಕೆ ಸಾರುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದರು ಎಂದು ಬಣ್ಣಿಸಿದರು.
ಈ ವೇಳೆ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಬಕ್ಕಿ ಮಂಜು ಹಾಗೂ ತಂಡದವರು ನಾಡಗೀತೆ ಮತ್ತು ರೈತ ಗೀತೆಯನ್ನು ಹಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ರಮೀಜಾಬಿ, ಉಪಾಧ್ಯಕ್ಷ ನಯನ ಲೋಕಪ್ಪಗೌಡ, ಸದಸ್ಯರಾದ ಪಾರ್ವತಮ್ಮ, ಲತಾ ಲಕ್ಷ್ಮಣ್, ಎಚ್.ಪಿ.ರಮೇಶ್, ಸಾಹಿತಿ ಹಳೆಕೋಟೆ ರಮೇಶ್, ತಹಶೀಲ್ದಾರ್ ನಂದಕುಮಾರ್, ತಾಪಂ ಇಒ ತಾರನಾಥ್, ಸಿಡಿಪಿಒ ಭಾರತಿ, ಕೃಷಿ ಇಲಾಖೆ ಅಧಿಕಾರಿ ಕುಮುದಾ, ಗುರುರಾಜ್, ಶಿವನಂಜೇಗೌಡ ಮತ್ತಿತರರಿದ್ದರು.







