ಸ್ಟಿಂಗ್ ಆಪರೇಷನ್ ಹಿಂದೆ ಕ್ರಿಮಿನಲ್ ಪಿತೂರಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಹೊಸದಿಲ್ಲಿ, ನ.6: 'ಇಂಡಿಯಾ ಟುಡೆ' ಚಾನೆಲ್ ಪ್ರಸಾರ ಮಾಡಿದ ಸ್ಟಿಂಗ್ ಆಪರೇಷನ್ ಕಳೆದ ಕೆಲವು ತಿಂಗಳಿನಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಗುರಿಪಡಿಸುತ್ತಿರುವ ಕೇಂದ್ರೀಯ ಗುಪ್ತಚರ ಏಜೆನ್ಸಿಯ 'ನಿಗೂಢ ನಡೆ'ಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಪಿ ಮುಹಮ್ಮದ್ ಬಶೀರ್ ಹೇಳಿದ್ದಾರೆ.
ತನಿಖೆಯ ಸಂದರ್ಭ ಎನ್‍ಐಎ ಸೇರಿದಂತೆ ಏಜೆನ್ಸಿಗಳಿಗೆ ಸೂಕ್ತ ಪುರಾವೆಗಳು ಸಿಗದೇ ಇದ್ದಾಗ ಸಂಘಟನೆಯ ವಿರುದ್ಧ ಸಾಕ್ಷ್ಯಾಧಾರಗಳನ್ನು ತಯಾರಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ. ಸಂಘಟನೆಯೊಂದಿಗೆ ಸಂಬಂಧ ಹೊಂದಿರದ ವ್ಯಕ್ತಿಗಳೊಂದಿಗೆ ನಡೆಸಿದ ಸಂವಹನದ ಮಾಹಿತಿಯನ್ನು ಬಳಸಿಕೊಂಡು ಈ ವಿಡಿಯೋವನ್ನು ತಯಾರಿಸಲಾಗಿದೆ ಎಂದವರು ಆರೋಪಿಸಿದ್ದಾರೆ.
ನಿರೀಕ್ಷಿಸಿದ್ದ ಫಲಿತಾಂಶ ದಕ್ಕದೇ ಇದ್ದಾಗ ವಿಷಯಗಳನ್ನು ಬದಲಾಯಿಸಲಾಗಿದೆ. ತಮ್ಮ ನಿರೂಪಣೆಗೆ ಹೋಲುವ ಹೊಸ ಪ್ರಶ್ನೆಗಳನ್ನು ತೂರಿಸಲಾಗಿದೆ. ಸಂಪೂರ್ಣ ಆವೃತ್ತಿಯನ್ನು ಮರುಹುಟ್ಟುಹಾಕಲಾಗಿದೆ ಮತ್ತು ಎಲ್ಲವೂ ಪೂರ್ವಯೋಜಿತವಾಗಿ ನಡೆದಿದೆ ಎಂದವರು ಹೇಳಿದ್ದಾರೆ.
ಈ ಸ್ಟಿಂಗ್ ಆಪರೇಷನ್ ಹಿಂದೆ ಕ್ರಿಮಿನಲ್ ಪಿತೂರಿ ಇದೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು. ಸಂಘ ಪರಿವಾರದ ಫ್ಯಾಸಿಸಂನ ವಿರುದ್ಧದ ಧೃಢ ನಿಲುವಿಗಾಗಿ ಮತ್ತು ಹಾದಿಯಾ ಪ್ರಕರಣದಂತಹ ವಿಷಯಗಳಲ್ಲಿ ಕಾನೂನು ಹೋರಾಟದ ನೇತೃತ್ವ ವಹಿಸುವ ಕಾರಣಕ್ಕಾಗಿ ಪಾಪ್ಯುಲರ್ ಫ್ರಂಟ್‍ನ್ನು ಗುರಿಪಡಿಸಲಾಗುತ್ತಿದೆ ಎಂದು ಮುಹಮ್ಮದ್ ಬಶೀರ್ ಆರೋಪಿಸಿದ್ದಾರೆ.
ಪಿಎಫ್ ಐ 'ನಮಗೂ ಹೇಳಲಿಕ್ಕಿದೆ' ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಅಭಿಯಾನದ ಅಂಗವಾಗಿ ದೇಶಾದ್ಯಂತ ನಡೆದ ಮಹಾ ಸಮಾವೇಶಗಳಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಪಿಎಫ್ ಐಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲವನ್ನು ನಾಶಪಡಿಸುವ ಉದ್ದೇಶವನ್ನು ಸ್ಟಿಂಗ್ ಆಪರೇಷನ್‍ನಂತಹ ಕೆಟ್ಟ ನಡೆಗಳು ಹೊಂದಿವೆ ಎಂದವರು ಹೇಳಿದ್ದಾರೆ.







