ಸರಕಾರದ ಅಸಮರ್ಥತೆಯ ಬಗ್ಗೆ ಬೆಳಕು ಚೆಲ್ಲುವುದನ್ನು ನಿಲ್ಲಿಸಲಾರೆ: ಜಾಮೀನಿನಲ್ಲಿ ಹೊರಬಂದ ವ್ಯಂಗ್ಯಚಿತ್ರಕಾರ ಬಾಲ

ಚೆನ್ನೈ, ನ. 6: ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸಾಮಿ, ನೆಲ್ಲಾಯಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರ ವ್ಯಂಗ್ಯ ಚಿತ್ರ ಬಿಡಿಸಿದ ಹಿನ್ನೆಲೆಯಲ್ಲಿ ರವಿವಾರ ಬಂಧಿತರಾಗಿದ್ದ ವ್ಯಂಗ್ಯಚಿತ್ರಕಾರ ಜಿ. ಬಾಲಕೃಷ್ಣ ಅಲಿಯಾಸ್ ಬಾಲ ಅವರಿಗೆ ತಿರುನಲ್ವೆಲ್ಲಿ ಜಿಲ್ಲಾ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
ಜಾಮೀನಿನಲ್ಲಿ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲ, ನಾನು ಕೊಲೆ ಮಾಡಿಲ್ಲ. ಆದುದರಿಂದ ಯಾವುದೇ ವಿಷಾದ ಇಲ್ಲ. ನಾನು ಸರಕಾರದ ಅಸಮರ್ಥತೆ ಬಗ್ಗೆ ವ್ಯಂಗ್ಯ ಚಿತ್ರದ ಮೂಲಕ ಬೆಳಕು ಚೆಲ್ಲುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
ಕುಟುಂಬವೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿ ಬಾಲ ವ್ಯಂಗ್ಯ ಚಿತ್ರ ರಚಿಸಿದ್ದರು. ಎದುರುಗಡೆ ಮಗುವೊದು ಕಣ್ಣೆದುರೇ ದಹನವಾಗುತ್ತಿದ್ದರೂ ಮುಖ್ಯಮಂತ್ರಿ, ನೆಲ್ಲಾಯಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ನಗ್ನರಾಗಿ ವ್ಯಂಗ್ಯ ಚಿತ್ರವನ್ನು ಅವರು ರಚಿಸಿದ್ದರು.
ಘಟನೆ ನಡೆದ ಬಳಿಕ ಬಾಲ ಅವರು ಈ ವ್ಯಂಗ್ಯ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ತಿರುನಲ್ವೇಲಿ ಜಿಲ್ಲಾಧಿಕಾರಿ ದೂರು ಸಲ್ಲಿಸಿದ್ದರು. ನವೆಂಬರ್ 1ರಂದು ತಿರುನಲ್ವೇಲಿ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು ಹಾಗೂ ನವೆಂಬರ್ 5ರಂದು ಬಾಲ ಅವರನ್ನು ಬಂಧಿಸಿದ್ದರು.







