ಕಪ್ಪುಹಣದ ವಿರುದ್ಧ ‘ಶೂನ್ಯ ಕ್ರಮ’: ಪ್ರಧಾನಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್

ಹೊಸದಿಲ್ಲಿ,ನ.6: ವಿದೇಶಗಳಲ್ಲಿ ಶೇಖರಗೊಂಡಿರುವ ಕಪ್ಪುಹಣದ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ಯಾರಡೈಸ್ ದಾಖಲೆಗಳಲ್ಲಿ ಹೆಸರುಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಹಾಯಕ ನಾಗರಿಕ ವಾಯುಯಾನ ಸಚಿವ ಜಯಂತ ಸಿನ್ಹಾ ಮತ್ತು ಬಿಜೆಪಿ ಸಂಸದ ಆರ್.ಕೆ.ಸಿನ್ಹಾ ಅವರ ರಾಜೀನಾಮೆಗೆ ಆಗ್ರಹಿಸಿದೆ.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರ ರಣದೀಪ ಸುರ್ಜೆವಾಲಾ ಅವರು, ಪ್ರಧಾನಿಯವರು ಸಿನ್ಹಾ ವಿರುದ್ಧ ಕ್ರಮವನ್ನು ಕೈಗೊಳ್ಳುವರೇ ಮತ್ತು ವಿದೇಶಗಳಲ್ಲಿ ಕಪ್ಪುಹಣದ ಖಾತೆಗಳನ್ನು ಹೊಂದಿರುವ ಎಲ್ಲ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಗೊಳಿಸುವರೇ ಎಂದು ಪ್ರಶ್ನಿಸಿದರು.
ವಿದೇಶಗಳಲ್ಲಿ ಕಪ್ಪುಹಣ ಖಾತೆಗಳ ಕುರಿತ ಪ್ಯಾರಡೈಸ್ ದಾಖಲೆಗಳಲ್ಲಿ ತನ್ನ ಹೆಸರು ಕಾಣಿಸಿಕೊಂಡ ಬಳಿಕ ಸಿನ್ಹಾ ಅವರಿಗೆ ಸರಕಾರದಲ್ಲಿ ಒಂದು ದಿನವೂ ಮುಂದುವರಿಯುವ ಹಕ್ಕು ಇಲ್ಲ ಮತ್ತು ಅವರು ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ವಿದೇಶಗಳಲ್ಲಿರುವ ಭಾರತೀಯರ ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಶೂನ್ಯ ಕ್ರಮ ಕೈಗೊಳ್ಳುವ ಮೂಲಕ ಮೋದಿಯವರು ಭಾರತದ ಜನತೆಯನ್ನು ವಂಚಿಸಿದ್ದಾರೆ. ಪನಾಮಾ ದಾಖಲೆಗಳ ಬಹಿರಂಗಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ, ಈಗ ಪ್ಯಾರಡೈಸ್ ದಾಖಲೆಗಳೊಂದಿಗೆ 714 ಭಾರತೀಯರ ನಂಟು ನೂತನ ತೆರಿಗೆ ಸ್ವರ್ಗಗಳನ್ನು ಬಹಿರಂಗಗೊಳಿಸಿದೆ ಎಂದರು.
ಮೋದಿ ಸರಕಾರವು ಪ್ಯಾರಡೈಸ್ ದಾಖಲೆಗಳ ಕುರಿತು ತನಿಖೆಗೆ ಆದೇಶಿಸಬೇಕು ಮತ್ತು ತಪ್ಪಿತಸ್ಥರನ್ನು ಬಿಡಬಾರದು ಎಂದು ಸುರ್ಜೆವಾಲಾ ಹೇಳಿದರು.
ಪನಾಮಾ ದಾಖಲೆಗಳಲ್ಲಿ ಹೆಸರಿಸಲಾಗಿದ್ದ ಬಿಜೆಪಿ ನಾಯಕರ ವಿರುದ್ಧ ಸರಕಾರವು ಎಂದು ಕ್ರಮಗಳನ್ನು ಆರಂಭಿಸಲಿದೆ ಎಂದು ಪ್ರಶ್ನಿಸಿದ ಅವರು, ಛತ್ತೀಸ್‌ಗಡದ ಮುಖ್ಯಮಂತ್ರಿ ರಮಣ ಸಿಂಗ್ ಅವರ ಪುತ್ರ ಅಭಿಷೇಕ ಸಿಂಗ್, ಬಿಜೆಪಿಯೊಂದಿಗೆ ನಂಟು ಹೊಂದಿರುವ ಪ.ಬಂಗಾಳದ ಶಿಶಿರ್ ಬಜೋರಿಯಾ(ಐಐಎಂ-ಶಿಲಾಂಗ್‌ನ ಅಧ್ಯಕ್ಷ) ಮತ್ತು ಅನುರಾಗ ಕೇಜ್ರಿವಾಲ್ ಮತ್ತಿತರರು ಇವರಲ್ಲಿ ಸೇರಿದ್ದಾರೆ ಎಂದು ಆರೋಪಿಸಿದರು.
ಅಮೆರಿಕದ ಕಂಪನಿ ಡಿ.ಲೈಟ್ ಡಿಸೈನ್ ಅದೇ ಹೆಸರಿನಲ್ಲಿ ತೆರಿಗೆ ಸ್ವರ್ಗ ಕೇಮ್ಯಾನ್ ಐಲಂಡ್‌ನಲ್ಲಿ ಅಧೀನ ಸಂಸ್ಥೆಯೊಂದನ್ನು ಹೊಂದಿದ್ದು, ಮೂರು ಮಿಲಿಯನ್ ಡಾ. ಸಾಲವೆತ್ತಿದೆ. ಜಯಂತ ಸಿನ್ಹಾ ಈ ಕಂಪನಿಯ ನಿರ್ದೇಶಕರಾಗಿದ್ದು, ಈ ಮಾಹಿತಿಯನ್ನು ಚುನಾವಣಾ ಆಯೋಗ, ಲೋಕಸಭಾ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಸಲ್ಲಿಸಿದ ಘೋಷಣೆಗಳಲ್ಲಿ ಮುಚ್ಚಿಟ್ಟಿದ್ದಾರೆ ಎಂದೂ ಸುರ್ಜೆವಾಲಾ ಆಪಾದಿಸಿದರು.







