ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಬಲ ಹೆಚ್ಚಬೇಕು: ವೈಸ್ ಅಡ್ಮಿರಲ್ ಎ.ಕೆ.ಚಾವ್ಲಾ

ಉಡುಪಿ, ನ.6: ಹಿಂದೂ ಮಹಾಸಾಗರ (ಐಒಆರ್) ವಲಯದಲ್ಲಿ ಹೆಚ್ಚುತ್ತಿರುವ ಚೀನದ ಉಪಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಭಾರತ ಪರಮಾಣು ಶಕ್ತಿ ಸಹಿತ ತನ್ನ ಮಿಲಿಟರಿ ಯುದ್ಧತಂತ್ರದ ಸಾಮರ್ಥ್ಯವನ್ನು ಹೆಚ್ಚಿಸ ಬೇಕಾದ ಅಗತ್ಯವಿದೆ ಎಂದು ಭಾರತೀಯ ನೌಕಾ ಪಡೆಯ ಗೋವಾ ನೇವಲ್ ಮುಖ್ಯಕಚೇರಿಯ ಮುಖ್ಯಸ್ಥ ವೈಸ್ ಅಡ್ಮಿರಲ್ ಅನಿಲ್‌ಕುಮಾರ್ ಚಾವ್ಲಾ ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲ ವಿವಿ ಹಾಗೂ ಡಿಪಾರ್ಟ್‌ಮೆಂಟ್ ಆಫ್ ಜಿಯೋಪೋಲಿಟಿಕ್ಸ್ ಎಂಡ್ ಇಂಟರ್‌ನೇಷನಲ್ ರಿಲೇಶನ್ಸ್‌ನ ಜಂಟಿ ಆಶ್ರಯದಲ್ಲಿ ಸೋಮವಾರ ‘ಹಿಂದೂ ಮಹಾಸಾಗರ ವಲಯದಲ್ಲಿ ಹೆಚ್ಚುತ್ತಿರುವ ಚೀನಾದ ಉಪಸ್ಥಿತಿಗೆ ಭಾರತದ ತಯಾರಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನ ತನ್ನ ಮಿಲಿಟರಿ ನೆಲೆಯನ್ನು ವಿಸ್ತರಿಸಲು ಕೈಗೊಂಡಿರುವ ಕ್ರಮಗಳಿಗೆ ಸೂಕ್ತ ಪ್ರತಿ ಉತ್ತರ ನೀಡಲು ಭಾರತ ತನ್ನ ಮಿಲಟರಿ ಬಲವನ್ನು ಸಬಲೀಕರಣಗೊಳಿಸಬೇಕಾಗಿದೆ ಎಂದು ಅವರು, ವಿಶ್ವದಲ್ಲಿ ಈವರೆಗೆ ಯುದ್ಧಗಳು ಎರಡು ಅಸಮಬಲ ದೇಶಗಳ ನಡುವೆಯೇ ನಡೆದಿದೆ. ಶಕ್ತಿಶಾಲಿ ದೇಶವೊಂದು ಇನ್ನೊಂದು ಶಕ್ತಿಶಾಲಿ ದೇವದೊಂದಿಗೆ ಯಾವತ್ತೂ ಯುದ್ಧವನ್ನು ಸಾರಿದ್ದಿಲ್ಲ. ಆದುದರಿಂದ ಭಾರತವೂ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ಸಮಗ್ರವಾದ ಯುದ್ಧತಂತ್ರವನ್ನು ಚುರುಕು ಗೊಳಿಸಬೇಕು ಎಂದರು.
ಇದಕ್ಕಾಗಿ ಭಾರತ ಶಕ್ತಿಶಾಲಿ ಪರಮಾಣು ನಿರೋಧಕಗಳನ್ನು ಅಳವಡಿಸಿಕೊಳ್ಳ ಬೇಕಿದೆ. ಅಲ್ಲದೇ ತನ್ನ ನೆರೆಕೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಹೊಂದಾಣಿಕೆ ಹಾಗೂ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕಿದೆ. ಪ್ರಾದೇಶಿಕ ಭದ್ರತಾ ವ್ಯವಸ್ಥೆಯನ್ನು ವಿಸ್ತರಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇತ್ತೀಚಿನವರೆಗೂ ತನ್ನ ಮಿಲಿಟರಿ ಸಾಮರ್ಥ್ಯವನ್ನು ತೀರಾ ರಹಸ್ಯವಾಗಿರಿಸಿದ್ದ ಚೀನ, ಇದೀಗ ಅದನ್ನು ಬಹಿರಂಗಪಡಿಸುತ್ತಿದೆ. ಈ ಬಗ್ಗೆ ಅದು ಈಗಾಗಲೇ ಏಳು ಶ್ವೇತಪತ್ರಗಳನ್ನು ಹೊರಡಿಸಿದೆ ಹಾಗೂ ತಾನು ಜಾಗತಿಕ ನೌಕಾಪಡೆಯ ನಿರ್ಮಾಣದಲ್ಲಿ ಆಸಕ್ತನಾಗಿರುವುದಾಗಿ ಹೇಳಿಕೊಂಡಿದೆ ಎಂದು ವೈಸ್ ಅಡ್ಮಿರಲ್ ಎ.ಕೆ.ಚಾವ್ಲಾ ನುಡಿದರು.
ಹಿಂದೂ ಮಹಾಸಾಗರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಯಾವುದೇ ಅಪಾಯ ಭಾರತಕ್ಕೆ ಎದುರಾಗದು. ಆದರೆ ಚೀನವನ್ನು ಈ ಭಯ ಯಾವತ್ತೂ ಕಾಡುತ್ತಿರುತ್ತದೆ. ಬ್ರಿಟನ್ ಮತ್ತು ರಶ್ಯಗಳು ಹಿಂದೂ ಮಹಾಸಾಗರದಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳಲು ವಿಫಲವಾಗಿವೆ. ಅದೇ ರೀತಿ ಚೀನಾಕ್ಕೂ ಈ ಅಪಾಯ ತೂಗುಕತ್ತಿಯಂತೆ ಕಾಡುತ್ತಿದೆ ಎಂದರು.
ದೇಶದ ಹೆಸರಿನ ಏಕೈಕ ಸಾಗರ: ವಿಶ್ವದಲ್ಲಿ ದೇಶವೊಂದರ ಹೆಸರನ್ನು ಹೊತ್ತ ಏಕೈಕ ಸಾಗರ ನಮ್ಮ ಹಿಂದೂ ಮಹಾಸಾಗರ. ಈ ವಲಯದಲ್ಲಿ ತನ್ನ ನೌಕಾ ನೆಲೆಯನ್ನು ಸ್ಥಾಪಿಸಲು ಚೀನಕ್ಕೆ ಅದರದೇ ಆದ ಕಾರಣಗಳಿರಬಹುದು. ಈ ವಲಯದಲ್ಲಿ ಚೀನ ಹೊಸ ಆಟಗಾರ ಹಾಗೂ ಅನನುಭವಿ ಎಂದವರು ನುಡಿದರು.
ಆರ್ಥಿಕತೆಯೇ ಈ ಹಿಂದೂ ಮಹಾಸಾಗರದಲ್ಲಿ ತನ್ನ ಮಿಲಟರಿ ನೆಲೆಯನ್ನು ಸ್ಥಾಪಿಸಲು ಪ್ರಮುಖ ಕಾರಣವೆಂದು ಚೀನ ಹೇಳಿಕೊಳ್ಳುತಿದ್ದರೂ, ಇಲ್ಲಿ ಅದರ ಅಸ್ತಿತ್ವವನ್ನು ನಿಕಟವಾಗಿ ಪರಿಶೀಲಿಸಿದಾಗ, ಅದಕ್ಕಿಂತ ಹೆಚ್ಚಿನ ಆಸಕ್ತಿ ಹಾಗೂ ಆದ್ಯತೆ ಚೀನಕ್ಕಿರುವಂತೆ ಭಾಸವಾಗುತ್ತಿದೆ. ಹಿಂದೂ ಮಹಾಸಾಗರದಲ್ಲಿ ಕಡಲುಗಳ್ಳತನ ವ್ಯಾಪಕವಾಗಿದ್ದು, ಅದನ್ನು ತಡೆಯಲು ತಾನು ರಕ್ಷಣಾ ತಂತ್ರಗಾರಿಕೆಯನ್ನು ಬಳಸುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ ಎಂದರು.
ಆದರೆ ಈ ವಲಯದಲ್ಲಿ ಕಡಲುಗಳ್ಳತನ ಇರುವುದು ನಿಜವಾದರೂ, ಅದನ್ನು ಎದುರಿಸಲು ಪರಮಾಣು ತಂತ್ರಗಾರಿಕೆಯ ಅಗತ್ಯವಿಲ್ಲ ಎಂಬುದನ್ನು ಖಚಿತ ವಾಗಿ ಹೇಳಬಹುದು. ಕಡಲುಗಳ್ಳರ ವಿರುದ್ಧ ಕ್ರಮದ ನೆಪದಲ್ಲಿ ಚೀನ, ಸಬ್‌ಮೆರೀನ್ ಹಾಗೂ ಯುದ್ಧನೌಕೆಗಳನ್ನು ಈವಲಯದಲ್ಲಿ ಕಾರ್ಯಾಚರಣೆಗೆ ಇಳಿಸುತ್ತಿದೆ ಎಂದವರು ಆರೋಪಿಸಿದರು.
ಚೀನ 2008ರಲ್ಲಿ ಹಿಂದೂ ಮಹಾಸಾಗರ ವಲಯದಲ್ಲಿ ತನ್ನ ನೆಲೆಯನ್ನು ಆರಂಭಿಸಿದಾಗ ಕೇವಲ ಮೂರು ಯುದ್ಧನೌಕೆಗಳಿದ್ದವು. ಆದರೆ ಇಂದು ಅದರ ಸಂಖ್ಯೆ 17-18ಕ್ಕೇರಿದೆ. ಐಒಆರ್ ವಲಯದಲ್ಲಿ ಕಾರ್ಯಾಚರಿಸುತ್ತಿರುವ ದೇಶಗಳಲ್ಲೇ ಚೀನ ನೌಕಾಪಡೆ ಎರಡನೇ ಸ್ಥಾನದಲ್ಲಿದೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ವಿಶ್ವದಲ್ಲೇ ಅತ್ಯಧಿಕ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಈ ವರ್ಷವಂತೂ ಅದು ಅತ್ಯಧಿಕ ಪ್ರಮಾಣದಲ್ಲಿದೆ. ಇಂಥ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಚೀನ ಸದಾ ಮುಂದೆ ಬರುತ್ತದೆ. ಚೀನದ ನೌಕಾಪಡೆ (ಪಿಐಎಲ್ ನೇವಿ) ಭಾರೀ ಪ್ರಮಾಣದಲ್ಲಿ ವೈದ್ಯಕೀಯ ನೆರವು ನೀಡುತ್ತದೆ. ಆದರೆ ಇಂಥ ಸಂದರ್ಭಗಳಲ್ಲಿ ಅದು ತನ್ನ ನಿಜವಾದ ಉದ್ದೇಶವನ್ನು ಮರೆಮಾಚಿ ಸಹಾಯ ಹಸ್ತವನ್ನು ಚಾಚುತ್ತದೆ. ತನಗೆ ಯಾವುದೇ ಮಿಲಿಟರಿ ಆಕಾಂಕ್ಷೆಗಳಿಲ್ಲ ಎಂದು ಸಾರುತ್ತದೆ ಎಂದು ಚಾವ್ಲಾ ವಿವರಿಸಿದರು.
ಬಗೆಹರಿಯದ ಗಡಿವಿವಾದ: ಚೀನದೊಂದಿಗೆ ಭಾರತದ ಗಡಿವಿವಾದ ಇನ್ನೂ ಇತ್ಯರ್ಥಗೊಳ್ಳದ ಹಿನ್ನೆಲೆಯಲ್ಲಿ ಐಒಆರ್‌ನಲ್ಲಿ ಚೀನದ ನೌಕಾನೆಲೆಯ ವಿಸ್ತರಣೆಯನ್ನು ನೋಡಬೇಕಾಗಿದೆ.ಈ ಪ್ರದೇಶದಲ್ಲಿರುವ ಅಭಿವೃದ್ಧಿ ಹೊಂದದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶದೊಂದಿಗೆ ವಾಣಿಜ್ಯ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಚೀನ ಮಾಡುತ್ತಿರುವ ಹೂಡಿಕೆಯ ನಿಜವಾದ ಉದ್ದೇಶ ಅದರ ಹೇಳಿಕೆಯನ್ನು ಸಂಶಯದಿಂದ ನೋಡುವಂತೆ ಮಾಡಿದೆ ಎಂದು ಅವರು ತಿಳಿಸಿದರು.
ಚೀನ-ಪಾಕ್ ಸಂಬಂಧ: ಅಲ್ಲದೇ ಕಳೆದ 60ವರ್ಷಗಳ ಪಾಕಿಸ್ತಾನ ದೊಂದಿಗಿನ ಚೀನಾದ ನಿಕಟ ಬಾಂಧವ್ಯ ಹಾಗೂ ಚೀನ-ಪಾಕಿಸ್ತಾನ ಆರ್ಥಿಕ ಗಡಿ ಸಹ ಭಾರತದ ಚಿಂತೆಗೆ ಕಾರಣವಾಗಿದೆ. ಚೀನ ತನ್ನ ಪರಮಾಣು ತಂತ್ರಜ್ಞಾನದ ಜ್ಞಾನವನ್ನು ಪಾಕಿಸ್ತಾನದೊಂದಿಗೆ ಮಾತ್ರ ಹಂಚಿಕೊಳ್ಳುತ್ತಿರುವುದು ಭಾರತದ ಕಳವಳವನ್ನು ಹೆಚ್ಚಿಸಿದೆ. ಪ್ರಾಯಶ: ಚೀನ, ಭಾರತವನ್ನು ಹದ್ದುಬಸ್ತಿನಲ್ಲಿಡಲು ಈ ತಂತ್ರಗಾರಿಕೆಯನ್ನು ಮಾಡುತ್ತಿದೆ ಎಂದವರು ಸಂಖೆ ವ್ಯಕ್ತಪಡಿಸಿದರು.
ಮಣಿಪಾಲದ ಡಿಪಾರ್ಟ್‌ಮೆಂಟ್ ಆಫ್ ಜಿಯೋಪೋಲಿಟಿಕ್ಸ್ ಎಂಡ್ ಇಂಟರ್‌ನೇಷನಲ್ ರಿಲೇಶನ್ಸ್‌ನ ನಿರ್ದೇಶಕ ಡಾ.ಅರವಿಂದ ಕುಮಾರ್ ಸ್ವಾಗತಿಸಿದರೆ, ನಂದಕಿಶೋರ್ ಅತಿಥಿಗಳನ್ನು ಪರಿಚಯಿಸಿದರು.







