ಬಿಐಎಎಲ್ ಅಧಿಕಾರಿಗಳಿಗೆ ಕನ್ನಡ ಭಾಷೆ ಕಲಿಕೆ ಕೋರ್ಸ್: ಡಾ.ಮನು ಬಳಿಗಾರ್
ಬೆಂಗಳೂರು, ನ. 6: ಕರ್ನಾಟಕ ಇಲ್ಲಿನ ಭಾಷೆ ಮತ್ತು ಸಂಸ್ಕೃತಿಗೆ ಬದ್ಧವಾಗಿದೆ ಎಂದಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲಿಯೇ ಹಿರಿಯ ಆಡಳಿತ ಸಿಬ್ಬಂದಿಗೆ ಕನ್ನಡ ಭಾಷೆ ಕಲಿಕೆ ಕೋರ್ಸ್ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಸೋಮವಾರ ಇಲ್ಲಿನ ಬಿಐಎಎಲ್‌ನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿದ ಅವರು, ‘ಭಾರತ ಒಂದು ವೈವಿಧ್ಯಮಯ ದೇಶ. ವಿವಿಧ ರಾಜ್ಯಗಳಲ್ಲಿ ಭಿನ್ನ ಭಾಷೆ, ಸಂಸ್ಕೃತಿ ಇದೆ. ಕರ್ನಾಟಕವೂ ತನ್ನ ಭಾಷೆ, ಸಂಸ್ಕೃತಿಯಿಂದ ಭಿನ್ನವಾಗಿ ಗಮನಸೆಳೆದಿದೆ ಎಂದರು.
ಕರ್ನಾಟಕದಲ್ಲಿ ಮಾತನಾಡುವ, ಬಳಕೆಯಲ್ಲಿರುವ ಭಾಷೆಗೆ ಹೆಚ್ಚಿನ ಮಹತ್ವ ಕೊಡಬೇಕು. ಯುವಪೀಳಿಗೆಯು ಉನ್ನತ ಮಟ್ಟಕ್ಕೆ ಕನ್ನಡ ಭಾಷೆಯನ್ನು ಒಯ್ಯಲು ಒತ್ತು ನೀಡಬೇಕು. ಇದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು’ ಎಂದು ಅವರು ಸಲಹೆ ಮಾಡಿದರು.
ಕರ್ನಾಟಕದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವಂತೆ ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಿತು. ಬಿಐಎಎಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಹರಿಮರರ್ ಹಾಜರಿದ್ದರು.







