ಪಂಚಾಯತ್ ಸಭೆಯಲ್ಲಿ ಮಹಿಳೆಯಿಂದ ಉಗುಳನ್ನು ನೆಕ್ಕಿಸಿದರು!

ಮುಝಫ್ಫರಪುರ, ನ.6: ಬಾಡಿಗೆ ವಿವಾದವೊಂದನ್ನು ಪರಿಹರಿಸಲು ಕರೆಯಲಾದ ಪಂಚಾಯತ್ ಸಭೆಯೊಂದರಲ್ಲಿ ಮಹಿಳೆಗೆ ಉಗುಳಲು ಹೇಳಿ ನಂತರ ಎಲ್ಲರೆದುರು ಅದನ್ನು ನೆಕ್ಕಲು ಹೇಳಿದ ಘಟನೆ ಇಲ್ಲಿನ ಬಿಶುನ್‍ಪುರ್ ನಲ್ಲಿ ನಡೆದಿದೆ.
ಬಿಶುನ್‍ಪುರ್ ಪಂಚಾಯತ್ ಸಮಿತಿ ಸದಸ್ಯೆ 38 ವರ್ಷದ ದುಲಾರಿ ದೇವಿ ಮತ್ತಾಕೆಯ ಪತಿ ರಾಮ್ ಬಚನ್ ಸಾಹ್ನಿ ಈ ಬಗ್ಗೆ ಪನಾಪುರ ಪೊಲೀಸ್ ಹೊರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಶುಪುರದ ನಯಾಬಜಾರ್ ನಲ್ಲಿ ದುಲಾರಿ ದೇವಿ ಒಡೆತನದ ಮಾರುಕಟ್ಟೆ ಸಂಕೀರ್ಣದಲ್ಲಿ ಅರುಣ್ ಸಿಂಗ್ ಎಂಬಾತ ಅಂಗಡಿಯೊಂದನ್ನು ಪಡೆದಿದ್ದ. ಆದರೆ ಆತ ಬಾಡಿಗೆ ಪಡೆದಾಗ ಸಹಿ ಹಾಕಿದ ಒಪ್ಪಂದದಂತೆ ಮಾಸಿಕ 2,500 ರೂ. ಬಾಡಿಗೆ ನೀಡದೆ ಬದಲು 2,000 ರೂ. ಪಾವತಿಸುತ್ತಿದ್ದ ಎನ್ನಲಾಗಿದೆ. ಅರುಣ್ ಸಿಂಗ್ ಅಂಗಡಿಯಲ್ಲಿ ಮಾದಕ ವಸ್ತುವನ್ನೂ ಮಾರಾಟ ಮಾಡುತ್ತಿದ್ದ ಎಂದು ದುಲಾರಿ ದೇವಿಗೆ ತಿಳಿದಾಗ ಅಂಗಡಿ ಖಾಲಿ ಮಾಡಲು ತಿಳಿಸಿದ್ದಳು. ಆದರೆ ಆತ ನಿರಾಕರಿಸಿದ ಕಾರಣ ವಿವಾದ ಪಂಚಾಯತ್ ಮೆಟ್ಟಿಲು ಹತ್ತಿತ್ತು.
ಪಂಚಾಯತ್ ಸದಸ್ಯರು ಸಿಂಗ್ ನನ್ನೇ ಬೆಂಬಲಿಸಿದ್ದರು. ಪಂಚಾಯತ್ ಆದೇಶ ಪಾಲಿಸಲು ಆಕೆ ನಿರಾಕರಿಸಿದಾಗ ಉಗುಳಲು ಹೇಳಿ ನಂತರ ಅದನ್ನು ನೆಕ್ಕಲು ಹೇಳಲಾಯಿತೆಂದು ದುಲಾರಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ದುಲಾರಿ ದೇವಿಯ ವಿರುದ್ಧ ಯಾವುದೇ ಆದೇಶ ಹೊರಡಿಸಲಿಲ್ಲವಾದರೂ ವಿವಾದವನ್ನು ಮುಂದುವರಿಸಿಕೊಂಡು ಹೋಗಲು ಇಚ್ಛಿಸದ ಆಕೆಯ ಪತಿ ಉಗುಳಿ ನಂತರ ಅದನ್ನು ನೆಕ್ಕಿ ಕ್ಷಮೆಯಾಚಿಸುವಂತೆ ಮಾಡಿದ ಎಂದು ತಮ್ಮ ಗುರುತು ಹೇಳಲಿಚ್ಛಿಸದ ಪಂಚಾಯತ್ ಸದಸ್ಯರೊಬ್ಬರು ಹೇಳಿಕೊಂಡಿದ್ದಾರೆ.





