ರಾಜ್ಯದಲ್ಲಿ ನಿರ್ದಿಷ್ಟ ವರ್ಗಗಳ ಮಕ್ಕಳಿಗೆ 5 ಸರಕಾರಿ ವಸತಿ ಶಾಲೆ ಆರಂಭ: ಸಚಿವ ತನ್ವೀರ್ ಸೇಠ್
ಮೈಸೂರು, ನ.6: ಶಿಕ್ಷಣದಿಂದ ವಂಚಿತರಾಗಿದ್ದ ಕೆಲವು ನಿರ್ದಿಷ್ಟ ವರ್ಗಗಳ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ರಾಜ್ಯ ಸರಕಾರ ಸರ್ವ ಶಿಕ್ಷಣ ಅಭಿಯಾನದಡಿ ರಾಜ್ಯದಲ್ಲಿ ನಿರ್ದಿಷ್ಟ ವರ್ಗಗಳ ಮಕ್ಕಳ 5 ಸರಕಾರಿ ವಸತಿ ಶಾಲೆಗಳನ್ನು ಆರಂಭಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ನಝರ್ ಬಾದ್ ನಲ್ಲಿ ಆಯೋಜಿಸಿದ್ದ ನಿರ್ದಿಷ್ಟ ವರ್ಗದ ಮಕ್ಕಳ ಸರಕಾರಿ ವಸತಿ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರ್ದಿಷ್ಟ ವರ್ಗದ ಮಕ್ಕಳ ಸರಕಾರಿ ವಸತಿ ಶಾಲೆಬೇಕೆಂಬ ಬೇಡಿಕೆ ಬಹಳ ದಿನಗಳಿಂದಲೂ ಕೇಳಿ ಬಂದಿತ್ತು. ಇದನ್ನು ಸರಕಾರದ ಗಮನಕ್ಕೆ ತಂದು ಸರ್ವ ಶಿಕ್ಷಣ ಅಭಿಯಾನದಡಿ ನೂತನ ಕಟ್ಟಡವನ್ನು ಕಟ್ಟಲಾಗಿದ್ದು, ಇಂದು ಉದ್ಘಾಟನೆ ಮಾಡಲಾಗಿದೆ ಎಂದರು.
ಶಿಕ್ಷಣದಿಂದ ವಂಚಿತರಾಗಿದ್ದ ಕೆಲವು ನಿರ್ದಿಷ್ಟ ವರ್ಗಗಳ ಮಕ್ಕಳನ್ನು ಮುಖ್ಯ ವಾಹಿನಿಗೆ ತರಬೇಕೆಂದು ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿ ರಾಜ್ಯದಲ್ಲಿ ನಿರ್ದಿಷ್ಟ ವರ್ಗಗಳ ಮಕ್ಕಳ 5 ಸರ್ಕಾರಿ ವಸತಿ ಶಾಲೆಗಳನ್ನು ಆರಂಭಿಸಿತು. ಅವುಗಳೆಂದರೆ ಬೆಂಗಳೂರು, ದಕ್ಷಿಣ ಜಿಲ್ಲೆಯ ಅರೆಹಳ್ಳಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಶಿವಮೊಗ್ಗ ಜಿಲ್ಲೆಯ ಅಗುಂಬೆ, ಧಾರವಾಡ ಜಿಲ್ಲೆಯ ಘಂಟಿಕೇರಿ ಮತ್ತು ಮೈಸೂರು ಜಿಲ್ಲೆಯ ನಜರ್ ಬಾದ್ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಪ್ರಥಮವಾಗಿ ಉತ್ತರ ವಲಯದ ಸರ್ಕಾರಿ ದೊಡ್ಡಪೇಟೆಯಲ್ಲಿ 2011ರ ಅಕ್ಟೋಬರ್ 12 ರಂದು ಆರಂಭವಾದ ಹಿರಿಯ ಪ್ರಾಥಮಿಕ ಶಾಲೆ ತದನಂತರದಲ್ಲಿ ಕೆಲವು ಭೌತಿಕ ಸವಲತ್ತುಗಳ ಕೊರತೆಯಿಂದಾಗಿ ನಝರ್ ಬಾದ್ ನ ಬೇಸಿಕ್ ಶಾಲೆಗೆ ಸ್ಥಳಾಂತರಗೊಳಿಸಲಾಯಿತು. ನಂತದಲ್ಲಿ 2013ರ ನವೆಂಬರ್ 31 ರಂದು ಎನ್.ಆರ್.ಮೊಹಲ್ಲಾದಲ್ಲಿರುವ ಹಳೇ ಡಿಡಿಪಿಐ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈಗ 100 ಮಕ್ಕಳ ದಾಖಲಾತಿಯೊಂದಿಗೆ ಶಾಲೆ ಯಶಸ್ವಿಯಾಗಿ ನಡೆಯುತ್ತಿದೆ. ಸದರಿ ಶಾಲೆಗೆ ನಝರ್ ಬಾದ್ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾಕ್ಟಿಸಿಂಗ್ ಆವರಣದಲ್ಲಿ ಸ್ವಂತ ಕಟ್ಟಡದ ಕಾಮಗಾರಿ ಮುಗಿದ್ದು, ಅದನ್ನು ಇಂದು ಸಚಿವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸದ ಪ್ರತಾಪಸಿಂಹ, ಶಾಸಕ ವಾಸು, ಉತ್ತರ ವಲಯ ಬಿಆರ್ ಸಿ ಎ.ಜೆ.ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಉದಯಕುಮಾರ್, ಗೌರಮ್ಮ, ಎಸ್.ಎಂ.ಮಹೇಶ್ ಉಪಸ್ಥಿತರಿದ್ದರು.







