‘ಯುವ ಶಕ್ತಿ’ ಹೊಸ ಪಕ್ಷ ಘೋಷಣೆ
ಬೆಂಗಳೂರು, ನ.6: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯುವಕರ ಶಕ್ತಿ ಪ್ರದರ್ಶನ ಮಾಡುವ ಸಲುವಾಗಿ ಯುವ ಶಕ್ತಿ ಎಂಬ ಪಕ್ಷವನ್ನು ಹುಟ್ಟು ಹಾಕಿದ್ದೇವೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯಲ್ಲಪ್ಪ ಹೆಗಡೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರದಲ್ಲಿ ಯುವಕರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ರಾಜಕೀಯ ರಂಗದಲ್ಲಿ ನಮ್ಮ ಪಾತ್ರ ಬಹಳ ಕಡಿಮೆ ಇದೆ. ಹೀಗಾಗಿ, ಮುಂದಿನ 2018ರ ವಿಧಾನಸಭೆಯ ಚುನಾವಣೆಯಲ್ಲಿ ಯುವಕರ ಶಕ್ತಿ ಪ್ರದರ್ಶನ ಮಾಡಲಿದ್ದೇವೆ. ಆದುದರಿಂದ ವಿದ್ಯಾರ್ಥಿ ಮತ್ತು ಯುವಜನರು ಸೇರಿ ಹೊಸ ಪಕ್ಷ ಹುಟ್ಟು ಹಾಕುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಸಾಮಾನ್ಯ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದು, ಇದರ ಮುಖ್ಯ ಉದ್ದೇಶ, ಶಾಸನ ಸಭೆಯಲ್ಲಿ ಯುವಕರಿಗೆ ಒಂದು ವೇದಿಕೆ ಕಲ್ಪಿಸುವುದಾಗಿದೆ. ಅಲ್ಲದೆ, ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸಲಾಗುತ್ತಿದೆ. ನಮ್ಮ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾವು ನಡೆಸುವ ಪರೀಕ್ಷೆಯಲ್ಲಿ ಪಾಸಾಗಬೇಕು. ನಾವು ಜಾತಿ, ಮತ, ಧರ್ಮದ ಆಧಾರಿತವಾಗಿ ಚುನಾವಣೆ ಎದುರಿಸುವುದಿಲ್ಲ ಎಂದು ತಿಳಿಸಿದರು.





