ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ: ಅಲ್ಪಸಂಖ್ಯಾತ ಆಯೋಗದ ಸಲಹೆ ಕೇಳಲು ರಾಜ್ಯ ಸರಕಾರ ಚಿಂತನೆ
ಬೆಂಗಳೂರು, ನ.6: ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ರಾಜ್ಯದ್ಯಂತ ಬಲವಾಗುತ್ತಿದ್ದು, ಈ ನಡುವೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ವಿಚಾರ ಕುರಿತು ಅಲ್ಪಸಂಖ್ಯಾತ ಆಯೋಗದ ಸಲಹೆಗಳನ್ನು ಕೇಳಲು ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಘೋಷಣೆ ಮಾಡುವಂತೆ ನ.5ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶವನ್ನು ನಡೆಸಲಾಯಿತು. ಪ್ರತ್ಯೇಕ ಧರ್ಮದ ಕೂಗು ಕುರಿತಂತೆ ರಾಜ್ಯದಲ್ಲಿ ಮೊಳಗುತ್ತಿರುವ ಹೋರಾಟಗಳನ್ನು ಗಂಭೀರವಾಗಿ ಗಮನಿಸುತ್ತಿರುವ ರಾಜ್ಯ ಸರಕಾರ ಚುನಾವಣಾ ಘೋಷಣೆಗಳಿಗೂ ಮುನ್ನ ವಿಚಾರವನ್ನು ಕೇಂದ್ರದ ಗಮನಕ್ಕೆ ತರಲು ಯತ್ನಗಳನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ವೀರಶೈವರ ಮತಗಳನ್ನು ಪಡೆಯುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವೋಟ್ ಬ್ಯಾಂಕ್ ರಾಜಕೀಯವನ್ನು ಅಂತಿಮಗೊಳಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಹಲವು ತಂತ್ರಗಳನ್ನು ರೂಪಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ವೀರಶೈವರ ಸಂಖ್ಯೆ ಹೆಚ್ಚಾಗಿದ್ದು, ವೀರಶೈವ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನವನ್ನು ನೀಡಿದ್ದೇ ಆದರೆ, ಇದು ಬಿಜೆಪಿ ಭವಿಷ್ಯದ ಮೇಲೆ ಭಾರೀ ಹೊಡೆತ ಬಿದ್ದಂತಾಗುತ್ತದೆ. ಸಂಪುಟದಲ್ಲಿರುವ ವೀರಶೈವ ಸಚಿವರಿಗೂ ಹೊಡೆತ ಬೀಳಲಿದೆ.







