ಕನಕದಾಸರು ತನ್ನ ಕೀರ್ತನೆಗಳ ಮೂಲಕ ಮೌಢ್ಯ ಹೋಗಲಾಡಿಸಲು ಯತ್ನಿಸಿದರು: ಪ್ರೊ.ಎಂ.ಕರೀಮುದ್ದೀನ್

ಮಂಡ್ಯ, ನ.6: ಬಹುಮುಖ ಪ್ರತಿಭೆ ಹೊಂದಿದ್ದ ಕನಕದಾಸರು, ಕವಿ, ಸಂತ, ವಚನಕಾರ, ಕೀರ್ತನೆಕಾರರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾದರು ಎಂದು ಸಾಹಿತಿ ಪ್ರೊ.ಎಂ.ಕರಿಮುದ್ದೀನ್ ತಿಳಿಸಿದ್ದಾರೆ.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದ ಅವರು, ಮಾನವ ಮಾನವನಾಗಿ ಬಾಳಬೇಕು. ಕುಲ, ಜಾತಿ ಎಂದು ಹೊಡೆದಾಡಬಾರದು. ಸತ್ಯ ಎಂಬುದು ಜೀವನದಲ್ಲಿ ಶ್ರೇಷ್ಠವಾದುದು ಎಂದು ಕನಕದಾಸರು ಕೀರ್ತನೆಗಳ ಮೂಲಕ ಸಾರಿದರು ಎಂದು ಹೇಳಿದರು.
ಮೋಹಿನಿ ತರಂಗಿಣಿ, ನಳಚರಿತ್ರೆ, ಹರಿಭಕ್ತಸಾರ ಸೇರಿದಂತೆ ಮುಂತಾದ ಗ್ರಂಥಗಳನ್ನು ಕನಕದಾಸರು ಬರೆದಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಯತ್ನಿಸಿದರು ಎಂದು ಅವರು, ಧರ್ಮ ಹೃದಯಕ್ಕೆ ಸಂಬಂಧಿಸಿದ್ದಾಗಿದ್ದು, ಅದಕ್ಕೆ ಹೃದಯವನ್ನು ಅರಳಿಸಿವ ಶಕ್ತಿ ಇದೆ. ಕುಲ, ಜಾತಿ ಎಂದು ಹೊಡೆದಾಡಬೇಡಿ. ಮೌಢ್ಯವನ್ನು ಬಿಟ್ಟು ಹೊರಬನ್ನಿ ಎಂದು ಕನಕದಾಸರು ಸಾರಿದರು ಎಂದು ವಿವರಿಸಿದರು.
ದೇವರು ಎಲ್ಲ ಕಡೆ ಇದ್ದಾನೆ. ನರಕ, ಸ್ವರ್ಗ ಎಂಬುದು ಬೇರಲ್ಲೂ ಇಲ್ಲ, ಭೂಮಿಯ ಮೇಲೆಯೇ ಇದೆ. ಹಸಿದವರಿಗೆ ಅನ್ನ, ದಾಹ ಎಂದವರಿಗೆ ನೀರು ಕೊಡಬೇಕು. ರೋಗಿಗಳಿಗೆ ಆರೈಕೆ, ಚಿಕಿತ್ಸೆ ಮಾಡಿದರೆ ಅಲ್ಲಿ ದೇವರು ಇರುತ್ತಾನೆ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಕುಲ ಕುಲವೆಂದು ಹೊಡೆದಾಡದೆ, ಮನುಷ್ಯ ಮನುಷ್ಯರಾಗಿ ಬಾಳುವುದನ್ನು ಕಲಿಯಬೇಕು ಎಂದು ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಹೇಳಿದ್ದಾರೆ ಎಂದರು.
ಜಾತಿ, ಭೇದ ಭಾವ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಬಾಳಬೇಕು ಎಂಬುದು ಬುದ್ಧ, ಬಸವಣ್ಣ, ಕನಕ ಮುಂತಾದ ದಾರ್ಶನಿಕರ ಸಂದೇಶವಾಗಿದೆ. ಆದರೆ, ಅದನ್ನು ಮರೆತು ಜಾತಿಗಳನ್ನು ಸೃಷ್ಟಿಸಿಕೊಂಡು ಹೊಡೆದಾಡುತ್ತಿದ್ದೇವೆ ಎಂದು ವಿಷಾದಿಸಿದರು.
ದೇವರಿಗೆ ಯಾವುದೇ ಧರ್ಮ, ಜಾತಿ ಇಲ್ಲ. ಭಕ್ತಿಯೇ ಮುಖ್ಯವಾಗಿದೆ. ದೊಡ್ಡವ, ಶ್ರೀಮಂತ, ಅಧಿಕಾರಸ್ಥ ಎಂದು ಅಹಂಕಾರಪಡಬಾರದು. ಹಣ ಇದ್ದಾಗ ಬಡವರಿಗೆ ಹಂಚಬೇಕು. ಅಧಿಕಾರ ಇದ್ದಾಗ ಸಹಾಯ ಮಾಡಬೇಕು. ಶೋಷಿತರನ್ನು ತುಳಿಯಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ತಾಪಂ ಅಧ್ಯಕ್ಷ ಕೆ.ಎಂ.ಬೀರಪ್ಪ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಪಂ ಸಿಇಒ ಬಿ.ಶರತ್, ಅಪರ ಜಿಲ್ಲಾಧಿಕಾರಿ ವಿಜಯ್, ಉಪವಿಭಾಗಾಧಿಕಾರಿ ರಾಜೇಶ್, ಅಲ್ಪಸಂಖ್ಯಾತರ ಮುಖಂಡ ಅಮ್ಜದ್ ಪಾಷ, ದಲಿತ ಮುಖಂಡ ಎಂ.ಬಿ.ಶ್ರೀನಿವಾಸ್, ಹಿಂದುಳಿದ ವರ್ಗಗಳ ಮುಖಂಡ ಎಲ್.ಸಂದೇಶ್, ಎನ್.ದೊಡ್ಡಯ್ಯ ಸೇರಿದಂತೆ, ಹಲವು ಮುಖಂಡರು ಉಪಸ್ಥಿತರಿದ್ದರು.







