ಮಾನಸಿಕ ಗಾಯದಿಂದ ಕನಕದಾಸರು ಮರುಹುಟ್ಟು ಪಡೆದರು: ಲಕ್ಷ್ಮೀಶ ತೋಳ್ಪಾಡಿ

ಉಡುಪಿ, ನ.6: ಕನಕದಾಸರು ಮಾನಸಿಕವಾಗಿ ಬಹಳ ಗಾಯಗೊಂಡು, ಬದಲಾವಣೆಯಾಗಿ ಹೊಸ ಹುಟ್ಟನ್ನು ಪಡೆದುಕೊಂಡು ದಾಸರಾದರು. ಅವರು ಎಲ್ಲವೂ ಬರೆದದ್ದು ದಾಸರಾದ ಬಳಿಕವೇ. ಅವರ ಮನಸ್ಸಿಗೆ ಗಾಯ ಆಗದಿದ್ದರೆ ಅವರ ಜೀವನದಲ್ಲಿ ಈ ರೀತಿಯ ಬದಲಾವಣೆ ಸಾಧ್ಯವಾಗುತ್ತಿರಲಿಲ್ಲ ಎಂದು ಸಂಸ್ಕೃತಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.
ಮಣಿಪಾಲ ವಿಶ್ವವಿದ್ಯಾನಿಲಯ ಕನಕದಾಸ ಅಧ್ಯಯನ ಸಂಶೋಧನ ಪೀಠದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕ ಜಿಜ್ಞಾಸೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದೇವರನ್ನು ಕಟ್ಟಿಕೊಂಡರೆ ಹಾಡು, ಹೊಸ ಪರಿಭಾಷೆ, ಕಥನ ಹುಟ್ಟಲು ಸಾಧ್ಯ. ಹೊಸ ಹುಟ್ಟು ಪಡೆದು ಹೊಸ ಮಾತು ಕೊಟ್ಟವರು ಕನಕದಾಸರು. ದೇವರನ್ನು ಕಟ್ಟಿಕೊಂಡರೆ ಅವರಿಗೆ ಲೋಕದ ಮುಲಾಜು ಇರುವುದಿಲ್ಲ. ಲೋಕದ ಮುಲಾಜಿಗೆ ಒಳಗಾದವರಿಗೆ ತನ್ನ ಸ್ವಂತ ಮಾತನ್ನು ಹೇಳಲು ಅಸಾಧ್ಯ ವಾಗುತ್ತದೆ. ದಾಸರು, ವಚನಕಾರರು ನಮಗೆ ಕೊಟ್ಟದ್ದು ಅವರ ಪಾಡು. ಯಾಕೆಂದರೆ ಅವರು ದೇವರೊಂದಿಗೆ ಮಾತನಾಡಿರುವುದೇ ಹೊರತು ಲೋಕದೊಂದಿಗೆ ಅಲ್ಲ. ಹೀಗಾಗಿ ಅದು ಸತ್ಯ ಮಾತು ಆಗಿದೆ ಎಂದರು.
ಲೋಕ ದೃಷ್ಠಿಯಿಂದ ಹೇಳಬೇಕಾದುದನ್ನು ಮುಚ್ಚಿಡಬೇಕೆಂಬ ಯಾವ ಕೃತಕತೆಯೂ ದಾಸರಲ್ಲಿ ಇಲ್ಲ. ಇದ್ದರೆ ಅವರು ದಾಸರೂ ಅಲ್ಲ ಮತ್ತು ಅದು ಆಧ್ಯಾತ್ಮವೂ ಅಲ್ಲ. ಹೊಸ ಹುಟ್ಟು ಹೊಸ ಮಾತನ್ನು ತಮ್ಮ ಜೀವನದಲ್ಲಿ ಸಾಧಿಸಿ ರುವ ಕನಕದಾಸರು ಕೀರ್ತನೆಯ ಮೂಲಕ ಚುಚ್ಚಿ ನಮ್ಮನ್ನು ಸೃಷ್ಟಿಶೀಲರನ್ನಾಗಿ ಾಡಿದ್ದಾರೆ ಎಂದು ಅವರು ಹೇಳಿದರು
ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್ ವಹಿಸಿದ್ದರು. ಪೀಠದ ಸಂಯೋಜ ನಾಧಿಕಾರಿ ಪ್ರೊ.ವರದೇಶ್ ಹಿರೇಗಂಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸಹ ಸಂಯೋಜಕ ಡಾ.ಅಶೋಕ್ ಆಳ್ವ ವಂದಿಸಿದರು. ಶರಿತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ನಂತರ ಮಾರುತಿ ಮತ್ತು ತಂಡದವರಿಂದ ಕನಕ ಗೀತೆಗಳ ಗಾಯನ ನಡೆಯಿತು.







