ರಾಜಕೀಯ ಲಾಭಕ್ಕಾಗಿ ಆಡಳಿತ ಯಂತ್ರದ ದುರುಪಯೋಗ: ಬಿಜೆಪಿ ವಿರುದ್ಧ ವೇಣುಗೋಪಾಲ್ ಆರೋಪ
ಉಡುಪಿ, ನ.6: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರಾಜಕೀಯ ಕಾರಣಗಳಿಗಾಗಿ ಕೇಂದ್ರ ಸರಕಾರ ಅಧೀನದ ಎಲ್ಲಾ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಆರೋಪಿಸಿದ್ದಾರೆ.
ತನ್ನ ಹಾಗೂ ತನ್ನ ಕುಟುಂಬದ ದೂರವಾಣಿಗಳನ್ನು ಕೇಂದ್ರ ಸರಕಾರ ಕದ್ದಾಲಿಸುತ್ತಿದೆ ಎಂಬ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಹೇಳಿಕೆಯ ಕುರಿತು, ಇಂದು ಉಡುಪಿಗೆ ಆಗಮಿಸಿದ ವೇಣುಗೋಪಾಲ್ ಅವರನ್ನು ಪ್ರಶ್ನಿಸಿದಾಗ ಅವರು ಈ ಆರೋಪ ಮಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗುಜರಾತ್‌ನ ಉಸ್ತುವಾರಿ ಅವರೂ ಸಹ ನಿನ್ನೆ ಇದೇ ಆರೋಪವನ್ನು ಕೇಂದ್ರ ವಿರುದ್ಧ ಮಾಡಿದ್ದಾರೆ ಎಂದರು.
ಕೇಂದ್ರ ಸರಕಾರ ರಾಜಕೀಯ ಉದ್ದೇಶಗಳಿಗಾಗಿ ಇಂಥ ಕೃತ್ಯಗಳನ್ನು ನಡೆಸುತ್ತಿದೆ. ಈ ಮೂಲಕ ಅದು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸಿಬಿಐ ಆಗಲಿ, ಎನ್‌ಐಎ,ಐಟಿ ಬ್ಯುರೋ ಎಲ್ಲಾ ತನಿಖೆ ಸಂಸ್ಥೆಗಳನ್ನು ಕೇಂದ್ರ ಸರಕಾರ ಬಳಸಿಕೊಳ್ಳುತ್ತಿದೆ. ಡಿ.ಕೆ.ಶಿವಕುಮಾರ್ ಪ್ರಕರಣ ಇದಕ್ಕೊಂದು ಉದಾಹರಣೆ. ಇದೊಂದು ಗಂಭೀರ ವಿಷಯವಾಗಿದೆ ಎಂದವರು ನುಡಿದರು.
ಬಿಜೆಪಿಯ ಪರಿವರ್ತನ ಯಾತ್ರೆ ಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ನಾವು ಚಿಂತಿತರಾಗಿಲ್ಲ. ಅವರು ಯಾವುದೇ ಯಾತ್ರೆ ಮಾಡಲಿ. ಚುನಾವಣೆಯಲ್ಲಿ ನಾವೇ ಗೆಲ್ಲುವುದು ಎಂಬ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಉತ್ತರಿಸಿದರು.
ನೋಟು ರದ್ಧತಿಯಿಂದ ಇಡೀ ದೇಶಕ್ಕೆ ಹಾನಿಯಾಗಿದೆ. ಒಂದು ವರ್ಷದ ಹಿಂದೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೋಟು ರದ್ಧತಿ ಬಗ್ಗೆ ಹೇಳಿದ ಮಾತು ಇಂದು ಅಕ್ಷರಶ: ಸತ್ಯವಾಗಿದೆ. ಇಂದು ಇಡೀ ದೇಶ ಈ ಮಾತನ್ನು ಹೇಳುತ್ತಿದೆ. ಇಂದು ಯುವಕರು ಉದ್ಯೋಗ ಕಳೆದುಕೊಳ್ಳುತಿದ್ದಾರೆ ಎಂದರು.
ಮೋದಿ ಹೇಳಿದಂತೆ ಭಯೋತ್ಪಾದನೆಗೆ ಎಲ್ಲಿ ಕಡಿವಾಣ ಬಿದ್ದಿದೆ, ಒಬ್ಬನೇ ಒಬ್ಬನ ಕಪ್ಪು ಹಣವನ್ನು ಹೊರತೆಗೆದಿದ್ದಾರಾ ಎಂದು ವೇಣುಗೋಪಾಲ್ ಪ್ರಶ್ನಿಸಿದರು. ಇದರಿಂದ ಇಡೀ ದೇಶಕ್ಕೆ ಹಾನಿಯಾಯಿತು ಎಂದರು.







